×
Ad

ಕಾರ್ಮಿಕರ ಸ್ಮಾರ್ಟ್‌ಕಾರ್ಡ್ ವಿತರಣೆ ಕುರಿತು ತನಿಖೆ: ದಿನಕರ ಬಾಬು

Update: 2019-08-28 20:30 IST

ಉಡುಪಿ, ಆ.28: ಜಿಲ್ಲೆಯ ಕಾರ್ಮಿಕರಿಗೆ ನೀಡುವ ಸ್ಮಾರ್ಟ್‌ಕಾರ್ಡ್ ನೊಂದಣಿ ಮಾಡಲು ನಿಯೋಜಿಸಿರುವ ಸಂಸ್ಥೆಯು, ಕಾರ್ಮಿಕರಿಂದ ತಲಾ 75 ರೂ. ಪಡೆದಿದ್ದು, ಒಂದು ವರ್ಷ ಆದರೂ ಕಾರ್ಡ್ ವಿತರಣೆ ಮಾಡದಿರುವ ಕುರಿತು ಸೂಕ್ತ ತನಿಖೆ ನಡೆಸಿ, ಕಾರ್ಮಿಕರಿಗೆ ಕಾರ್ಡ್ ವಿತರಿಸುವ ವ್ಯವಸ್ಥೆ ಆಗಬೇಕು ಹಾಗೂ ಇದರಲ್ಲಿ ಹಣದ ದುರುಪಯೋಗ ಆಗಿದ್ದಲ್ಲಿ ನೌಕರರ ಹಣ ವಾಪಾಸು ನೀಡುವ ವ್ಯವಸ್ಥೆ ಆಗಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಹೇಳಿದ್ದಾರೆ.

ಕಟಪಾಡಿ ಗ್ರಾಪಂ ವ್ಯಾಪ್ತಿಯ ಇರ್ವತ್ತೂರು ಭಾಗ ನೆರೆ ಪ್ರದೇಶವಾಗಿದ್ದು, ಇಲ್ಲಿ ನೀರು ಹರಿದು ಹೋಗಲು ಚರಂಡಿ ಮಾಡಿಕೊಡುವಂತೆ ಕೇಳಿದ್ದರೂ ಈವರೆಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಶೀಘ್ರದಲ್ಲಿ ಅಲ್ಲಿಗೆ ಚರಂಡಿ ವ್ಯವಸ್ಥೆ ಮಾಡಿಕೊುವಂತೆ ಅಧ್ಯಕ್ಷರು ಸೂಚಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಗ್ರಾಪಂ ಗಮನಕ್ಕೆ ತರಬೇಕು ಎಂದು ಕಳೆದ ಸಭೆಯಲ್ಲಿ ತಿಳಿಸಿದ ಬಳಿಕವೂ ಅಧಿಕಾರಿಗಳು ಸೂಚನೆಗಳನ್ನು ಪಾಲಿಸದಿರುವ ಬಗ್ಗೆ ಸಭೆಯಲ್ಲಿ ಜಿಪಂ ಸದಸ್ಯರು ಆಕ್ಷೇಪಿಸಿದರು. ಇದಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್ ಪ್ರತಿಕ್ರಿಯಿಸಿ, ಈ ವಿಷಯವಾಗಿ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡುವಂತೆ ಎಲ್ಲಾ ಗ್ರಾಪಂಗಳಿಗೆ ತಿಳಿಸಲಾಗಿದೆ ಎಂದರು.

ಪರ್ಕಳ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವ ಬಗ್ಗೆ ಹಿರಿಯಡ್ಕ ಜಿಪಂ ಸದಸ್ಯೆ ಚಂದ್ರಿಕಾ ರಂಜನ್ ಕೇಲ್ಕರ್ ಪ್ರಸ್ತಾಪಿಸಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಪ್ರತಿಕ್ರಿಯಿಸಿ, ಇಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, 2 ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು. ಇದೇ ವೇಳೆ ಹಿರಿಯಡ್ಕ ಕಸ ವಿಲೇವಾರಿ ಘಟಕ ನಿರ್ಮಾಣದ ಅಗತ್ಯತೆ ಕುರಿತು ಚರ್ಚಿಸಿದ್ದು, ಇದಕ್ಕೆ ಶೀಘ್ರದಲ್ಲಿ ಕೆಲಸ ಆರಂಭಿಸುವಂತೆ ಅಧ್ಯಕ್ಷರು ಸೂಚನೆ ನೀಡಿದರು.

ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ ಕೋಟಂಬೈಲು ಪ್ರದೇಶದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿ ಸ್ಥಳ ಪರಿಶೀಲನೆ ನಡೆದಿದ್ದು, ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಸದಸ್ಯರು ಆಕ್ಷೇಪಿಸಿದರು. ಈ ಕುರಿತಂತೆ ಇದೇ ತಿಂಗಳ 31ರೊಳಗೆ ತಾಂತ್ರಿಕ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಅಧ್ಯಕ್ಷರಿಗೆ ವರದಿ ಸಲ್ಲಿಸುವಂತೆ ಸಿಂಧು ರೂಪೇಶ್ ತಾಕೀತು ಮಾಡಿದರು.

ಹಾವಂಜೆ ಕೀಳಿಂಜೆ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಈ ಬಗ್ಗೆ ಸದಸ್ಯ ಜನಾರ್ದನ ತೋನ್ಸೆ ಸಭೆಯಲ್ಲಿ ಪ್ರಸ್ತಾಪಿಸಿದರು. 2 ತಿಂಗಳಲ್ಲಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆಯ್ನು ಸಂಬಂಧಪಟ್ಟ ಅಧಿಕಾರಿ ನೀಡಿದರು.

ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟಾರೆ 26 ಬಾಲಕರ ಹಾಗೂ 22 ಬಾಲಕಿಯರ ಶೌಚಾಲಯಗಳ ನಿರ್ಮಾಣವಾಗಬೇಕಿದೆ ಎಂದು ಸದಸ್ಯರು ಪ್ರಸ್ತಾಪಿಸಿದ್ದು, ಅಕ್ಟೋಬರ್ 2ರೊಳಗೆ ಎಲ್ಲಾ ಶಾಲೆಗಳಲ್ಲಿ ಶೌಚಾಲ ಯಗಳನ್ನು ನಿರ್ಮಿಸಿ ಈ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ತ್ರಾಸಿ ಗ್ರಾಪಂ ವ್ಯಾಪ್ತಿಯ ಮಹಾಗಣಪತಿ ದೇವಸ್ಥಾನ ಬಳಿಯ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ದಿನಕರ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಬಾಬು ಶೆಟ್ಟಿ, ಶಶಿಕಾಂತ್ ಪಡುಬಿದ್ರೆ, ಉದಯ್ ಎಸ್ ಕೋಟ್ಯಾನ್, ಜಿಪಂ ಸಿಇಓ ಸಿಂಧೂ ಬಿ ರೂಪೇಶ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಯೋಜನಾ ನಿರ್ದೇಶಕ ಮಧುರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News