ಉಡುಪಿ: ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ನಡಿಗೆ
ಉಡುಪಿ, ಆ.28: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಇಲಾಖೆ -ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ ಮತ್ತು ಸೈಟ್ ಲೈಫ್ ಇಂಟರ್‌ನೇಷನಲ್ ಇವರು ಸಂಯುಕ್ತವಾಗಿ ನೇತ್ರದಾನ ಪಾಕ್ಷಿಕದ ಅಂಗವಾಗಿ ಬುಧವಾರ ಸಂಜೆ ನಗರದಲ್ಲಿ ನೇತ್ರದಾನ ಜಾಗೃತಿ ನಡಿಗೆ ಆಯೋಜಿಸಿದ್ದವು.
ನಗರದ ಕಲ್ಸಂಕದಿಂದ ಪ್ರಾರಂಭಗೊಂಡ ನಡಿಗೆ ಜಾಥ ಬಸ್‌ನಿಲ್ದಾಣದ ಬಳಿ ಇರುವ ಬೋರ್ಡ್ ಹೈಸ್ಕೂಲ್‌ವರೆಗೆ ನಡೆಯಿತು. ಮಣಿಪಾಲ ಮಾಹೆಯ ಸಹ ಉಪಕುಲಪತಿ ಡಾ. ಪೂರ್ಣಿಮಾ ಬಾಳಿಗಾ, ಉಡುಪಿ ಆರಕ್ಷಕ ವೃತ್ತ ನಿರೀಕ್ಷಕ ಮಂಜುನಾಥ್, ಮಾಹೆ ಮಣಿಪಾಲದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿಗಳ ನಿರ್ದೇಶಕಿ ಗೀತಾ ಮಯ್ಯ ಇವರು ನಡಿಗೆಗೆ ಹಸಿರು ನಿಶಾನೆ ತೋರಿದರು.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ ಹೆಗ್ಡೆ, ನೇತ್ರ ವಿಭಾಗದ ಮುಖ್ಯಸ್ಥೆ ಡಾ.ಸುಲತಾ ಭಂಡಾರಿ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಸುರೇಂದ್ರ ಚಿಂಬಾಳ್ಕರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಜಾಗೃತಿ ನಡಿಗೆ ಕಲ್ಸಂಕದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಕೊನೆಗೊಂಡಿತು. ನೇತ್ರದಾನ ಜಾಗೃತಿಯ ಬಗ್ಗೆ ಬೀದಿ ನಾಟಕವನ್ನು ಮಣಿಪಾಲ ನರ್ಸಿಂಗ್ ವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸುಮಾರು 250 ಮಂದಿ ವೈದ್ಯರು, ದಾದಿಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಇದರಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಪ್ರತಿವರ್ಷ ಆ.25ರಿಂದ ಸೆ.8ರವರೆಗೆ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನಡೆಸಲಾಗುತ್ತದೆ. ವರದಿಗಳ ಪ್ರಕಾರ ವಿಶ್ವದ ಪ್ರತಿ ಐದು ಅಂಧ ಜನರಲ್ಲಿ ಒಬ್ಬರು ಭಾರತದವರು. ಅಂದರೆ ಕನಿಷ್ಠ 46 ಲಕ್ಷ ಭಾರತೀಯರು ಪಾರಪಟಲದ ಕುರುಡುತನದಿಂದ ಬಳಲುತ್ತಿದ್ದಾರೆ. ಆದರೆ ನೇತ್ರದಾನದ ಪ್ರಮಾಣವು ಕೇವಲ 35,000 ಮಾತ್ರ. ಆದ್ದರಿಂದ ಪಾರಪಟಲ (ಕಾರ್ನಿಯಾ) ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆಗೊಳಿಸಲು ಸಮಾಜದ ಯುವಕರು ಮತ್ತು ಹಿರಿಯರು ಸೇರಿದಂತೆ ಸಮಾಜದ ಜನರಿಗೆ ಶಿಕ್ಷಣ ನೀಡುವುದು ಬಹಳ ಅವಶ್ಯಕವಾಗಿದೆ ಎಂದು ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.