ಕ್ಯಾಲಿಫೋರ್ನಿಯ: ಸಿಖ್ ವ್ಯಕ್ತಿಯ ಇರಿದು ಹತ್ಯೆ
ಕ್ಯಾಲಿಫೋರ್ನಿಯ (ಅಮೆರಿಕ), ಆ. 28: ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಭಾರತದ ಸಿಖ್ ವ್ಯಕ್ತಿಯೊಬ್ಬರು ಸಂಜೆಯ ನಡಿಗೆಯಲ್ಲಿ ತೊಡಗಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬನು ಚೂರಿಯಿಂದ ಇರಿದು ಕೊಂದಿದ್ದಾನೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ರವಿವಾರ ರಾತ್ರಿ ಸುಮಾರು 9 ಗಂಟೆಯ ಹೊತ್ತಿಗೆ ಟ್ರಾಸಿಯಲ್ಲಿರುವ ಗ್ರೆಚನ್ ಟ್ಯಾಲಿ ಪಾರ್ಕ್‌ನಲ್ಲಿ 64 ವರ್ಷದ ಪರಮ್‌ಜಿತ್ ಸಿಂಗ್ ಮೇಲೆ ದಾಳಿ ನಡೆಸಲಾಯಿತು. ಬಳಿಕ ಅವರು ತೀವ್ರ ಸ್ವರೂಪದ ಗಾಯಗಳಿಂದಾಗಿ ಮೃತಪಟ್ಟರು ಎಂದು ‘ಎಬಿಸಿ ನ್ಯೂಸ್’ ವರದಿ ಮಾಡಿದೆ.
ಮೈದಾನದಲ್ಲಿ ಕುಸಿದು ರಕ್ತ ಸುರಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ನೋಡಿದ ದಾರಿಹೋಕರೊಬ್ಬರು 911 ಸಂಖ್ಯೆಗೆ ಕರೆ ಮಾಡಿದರು ಎಂದು ಪೊಲೀಸರು ತಿಳಿಸಿದರು.
ಈ ಘಟನೆ ನಡೆದ ಸಮಯದಲ್ಲೇ ವ್ಯಕ್ತಿಯೊಬ್ಬ ಪಾರ್ಕ್‌ನಿಂದ ಬೇಲಿ ಹಾರಿ ಓಡುತ್ತಿರುವ ದೃಶ್ಯವೊಂದು ಸಿಸಿಟಿವಿಯಲ್ಲಿ ದಾಖಲಾಗಿದೆ. ಆ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಸೋಮವಾರ ಸಾರ್ವಜನಿಕರ ನೆರವು ಕೋರಿದ್ದಾರೆ.
‘‘ಆ ವ್ಯಕ್ತಿ ಯಾರು, ಅಲ್ಲಿಗೆ ಯಾಕೆ ಬಂದಿದ್ದರು, ಅವರು ಏನು ನೋಡಿರಬಹುದು ಹಾಗೂ ಘಟನೆಯಲ್ಲಿ ಅವರು ಶಾಮೀಲಾಗಿರುವ ಸಾಧ್ಯತೆ ಮುಂತಾದ ವಿಷಯಗಳನ್ನು ನಾವು ತಿಳಿದುಕೊಳ್ಳಲು ಬಯಸಿದ್ದೇವೆ’’ ಎಂದು ಟ್ರಾಸಿ ಪೊಲೀಸ್ ವಕ್ತಾರ ಲೆಫ್ಟಿನೆಂಟ್ ಟ್ರೆವಿನ್ ಫ್ರೇಟಸ್ ತಿಳಿಸಿದ್ದಾರೆ.
3 ವರ್ಷ ಹಿಂದೆ ವಲಸೆ ಬಂದಿದ್ದ ಸಿಂಗ್
ಪ್ರತಿ ನಿತ್ಯ ಎರಡು ಬಾರಿ ನಡಿಗೆಯಲ್ಲಿ ತೊಡಗುತ್ತಿದ್ದ ಸಿಂಗ್ ಸಾಂಪ್ರದಾಯಿಕ ಸಿಖ್ ಪೇಟವನ್ನು ಧರಿಸಿದ್ದರು. ಸಿಖ್ ಆಗಿರುವ ಕಾರಣಕ್ಕೆ ಅವರನ್ನು ಸಾಯಿಸಲಾಗಿದೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆದರೆ, ಅದು ದ್ವೇಷಾಪರಾಧವೇ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಿಂಗ್ ಭಾರತದಿಂದ ಮೂರು ವರ್ಷಗಳ ಹಿಂದೆ ಟ್ರಾಸಿಗೆ ವಲಸೆ ಬಂದಿದ್ದರು. ಅವರಿಗೆ ಇಬ್ಬರು ಮಕ್ಕಳು ಮತ್ತು ಮೂವರು ಮೊಮ್ಮಕ್ಕಳು ಇದ್ದಾರೆ.
ಶಂಕಿತನ ಬಗ್ಗೆ ಮಾಹಿತಿ ನೀಡಿದವರಿಗೆ ಸಿಖ್ ಸಮುದಾಯವು 1000 ಡಾಲರ್ (ಸುಮಾರು 72,000 ರೂಪಾಯಿ) ಬಹುಮಾನ ಘೋಷಿಸಿದೆ.