ಕರಾಚಿಯ ವಾಯು ಮಾರ್ಗಗಳನ್ನು 4 ದಿನ ಮುಚ್ಚಿದ ಪಾಕ್

Update: 2019-08-28 16:16 GMT

ಇಸ್ಲಾಮಾಬಾದ್, ಆ. 28: ಕರಾಚಿ ವಾಯು ಪ್ರದೇಶದ ಮೂರು ವಾಯು ಮಾರ್ಗಗಳನ್ನು ಆಗಸ್ಟ್ 28ರಿಂದ ಆಗಸ್ಟ್ 31ರವರೆಗೆ ಪಾಕಿಸ್ತಾನ ಮುಚ್ಚಿದೆ ಎಂದು ದೇಶದ ನಾಗರಿಕ ವಾಯುಯಾನ ಪ್ರಾಧಿಕಾರ ಬುಧವಾರ ಘೋಷಿಸಿದೆ.

ಭಾರತೀಯ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಆ ದೇಶದ ಸರಕಾರ ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

 ಈ ನಿಷೇಧವು ಕರಾಚಿಯ ಆಕಾಶದಲ್ಲಿನ ಮೂರು ವಾಯು ಮಾರ್ಗಗಳನ್ನು ಬಳಸುವ ಎಲ್ಲ ಅಂತರ್‌ರಾಷ್ಟ್ರೀಯ ವಿಮಾನಗಳಿಗೆ ಅನ್ವಯಿಸುತ್ತದೆ. ಕರಾಚಿ ವಾಯು ಪ್ರದೇಶವನ್ನು ತಪ್ಪಿಸುವ ಪರ್ಯಾಯ ಮಾರ್ಗವನ್ನೂ ಪ್ರಾಧಿಕಾರ ಪೈಲಟ್‌ಗಳಿಗೆ ನೀಡಿದೆ.

ನಾಲ್ಕು ದಿನಗಳ ನಿಷೇಧವು ಸೆಪ್ಟಂಬರ್ 1ರಂದು ಮುಕ್ತಾಯಗೊಳ್ಳುತ್ತದೆ ಎಂದು ‘ನೋಟಿಸ್ ಟು ಏರ್‌ಮನ್’ನಲ್ಲಿ ವಾಯುಯಾನ ಪ್ರಾಧಿಕಾರ ತಿಳಿಸಿದೆ.

ಭಾರತದೊಂದಿಗಿನ ವಾಯುಪ್ರದೇಶವನ್ನು ‘ಸಂಪೂರ್ಣವಾಗಿ ಮುಚ್ಚುವ’ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ಪರಿಶೀಲಿಸುತ್ತಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಮಂಗಳವಾರ ಟ್ವೀಟ್ ಮಾಡಿದ್ದರು.

ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯು ಪ್ರದೇಶವನ್ನು ಮತ್ತು ಭಾರತ ಅಫ್ಘಾನಿಸ್ತಾನ ವ್ಯಾಪಾರಕ್ಕೆ ಪಾಕಿಸ್ತಾನದ ಭೂಪ್ರದೇಶವನ್ನು ಮುಚ್ಚುವ ಬಗ್ಗೆ ಪಾಕಿಸ್ತಾನದ ಸಚಿವ ಸಂಪುಟ ಮಂಗಳವಾರ ಚರ್ಚೆ ನಡೆಸಿತ್ತು. ಈ ಕುರಿತ ಅಂತಿಮ ನಿರ್ಧಾರವನ್ನು ಪ್ರಧಾನಿ ಇಮ್ರಾನ್ ಖಾನ್ ತೆಗೆದುಕೊಳ್ಳಲಿದ್ದಾರೆ.

ಭಾರತೀಯ ವಿಮಾನಗಳಿಗೆ ಸುದೀರ್ಘ ಕಾಲ ವಾಯುಪ್ರದೇಶ ಮುಚ್ಚಿದ್ದ ಪಾಕ್

ಫೆಬ್ರವರಿ 14ರಂದು ಪುಲ್ವಾಮದಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ಫೆಬ್ರವರಿ 27ರಂದು ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಶಿಬಿರವೊಂದರ ಮೇಲೆ ಭಾರತೀಯ ವಾಯು ಪಡೆ ದಾಳಿ ನಡೆಸಿತ್ತು. ಅಂದು ಪಾಕಿಸ್ತಾನವು ತನ್ನ ವಾಯು ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿತು.

ಪಾಕಿಸ್ತಾನವು ಮಾರ್ಚ್ 27ರಂದು ಹೊಸದಿಲ್ಲಿ, ಬ್ಯಾಂಕಾಕ್ ಮತ್ತು ಕೌಲಾಲಂಪುರಗಳ ವಿಮಾನಗಳನ್ನು ಹೊರತುಪಡಿಸಿ ಎಲ್ಲ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ತೆರೆಯಿತು.

ಅಂತಿಮವಾಗಿ, ಪಾಕಿಸ್ತಾನವು ಜುಲೈ 16ರಂದು ತನ್ನ ವಾಯು ಪ್ರದೇಶವನ್ನು ಭಾರತದ ವಿಮಾನಗಳಿಗೆ ತೆರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News