ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಅಧ್ಯಕ್ಷೆಯನ್ನು ಭೇಟಿಯಾದ ಪಾಕ್ ರಾಯಭಾರಿ

Update: 2019-08-28 16:31 GMT

ನ್ಯೂಯಾರ್ಕ್, ಆ. 28: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ಮಲೀಹಾ ಲೋಧಿ ಸೋಮವಾರ ಇಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಅಧ್ಯಕ್ಷೆ ಮರಿಯಾ ಫೆರ್ನಾಂಡಿಸ್ ಎಸ್ಪಿನೊಸರನ್ನು ಭೇಟಿಯಾಗಿ, ಕಾಶ್ಮೀರದಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ.

ವಿಶ್ವಸಂಸ್ಥೆಯು ಕಾಶ್ಮೀರದ ಕುರಿತ ತನ್ನ ಬದ್ಧತೆಯನ್ನು ಪೂರೈಸಬೇಕು ಎಂದು ಮಂಗಳವಾರ ಟ್ವೀಟೊಂದರಲ್ಲಿ ಲೋಧಿ ಹೇಳಿದ್ದಾರೆ ಎಂದು ಸರಕಾರಿ ಒಡೆತನದ ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ.

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಸೇರಿದಂತೆ ಪ್ರತಿಯೊಂದು ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ವಿಷಯವನ್ನು ನಾನು ಪ್ರಸ್ತಾಪಿಸುವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ ಗಂಟೆಗಳ ಬಳಿಕ ಲೋಧಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಧ್ಯಕ್ಷೆಯನ್ನು ಭೇಟಿಯಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಪಡಿಸಿದ ಬಳಿಕ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News