ಕಾಶ್ಮೀರದಲ್ಲಿ ಪ್ರೌಢ ಶಾಲೆ ಮರು ಆರಂಭ: ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿಗಳು

Update: 2019-08-28 17:21 GMT

ಶ್ರೀನಗರ, ಆ. 28: ನಿರ್ಬಂಧ ಹಿಂದೆ ತೆಗೆದ ಕಾಶ್ಮೀರ ಕಣಿವೆಯಲ್ಲಿ ಬುಧವಾರ ಪ್ರೌಢಶಾಲೆ ಮರು ಆರಂಭವಾಗಿದೆ. ಆದರೆ, ಶಾಲೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಿಂದ ಕಣಿವೆಯ ಹೈಯರ್ ಸೆಕಂಡರಿ ಶಾಲೆಗಳು ಮುಚ್ಚಿವೆ.

ಪ್ರೌಢ ಶಾಲೆ ಇಂದು ಬೆಳಗ್ಗೆ ಆರಂಭವಾಗಿದೆ. ಆದರೆ, ಶಿಕ್ಷಕ ವೃಂದದ ಹಾಜರಿ ವಿರಳವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘‘ಕಾಶ್ಮೀರ ಕಣಿವೆಯ ನಿರ್ಬಂಧ ಸಡಿಲಗೊಳಿಸಿದ ಪ್ರದೇಶಗಳಲ್ಲಿ ನಾಳೆಯಿಂದ ಎಲ್ಲ ಪ್ರೌಢ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ’’ ಎಂದು ಜಮ್ಮು ಹಾಗೂ ಕಾಶ್ಮೀರದ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಸೆಹ್ರಿಶ್ ಅಸ್ಗರ್ ಮಂಗಳವಾರ ಹೇಳಿದ್ದರು.

 ಕಣಿವೆಯಾದ್ಯಂತದ 84 ಪೊಲೀಸ್ ಸ್ಟೇಶನ್ ಪ್ರದೇಶಗಳಲ್ಲಿ ಜನರ ಚಲನವಲನದ ಮೇಲಿನ ನಿರ್ಬಂಧ ಈಗ ಸಡಿಲಗೊಳಿಸಲಾಗಿದೆ. ಶಾಲೆಗಳ ಸ್ಥಿತಿಗತಿ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾಶ್ಮೀರ ಶಿಕ್ಷಣ ಇಲಾಖೆಯ ನಿರ್ದೇಶಕ ಯೂನಿಸ್ ಮಲಿಕ್, ಕಣಿವೆಯಾದ್ಯಂತ ಮಂಗಳವಾರ 3,037 ಪ್ರಾಥಮಿಕ ಶಾಲೆಗಳು ಹಾಗೂ 774 ಮಾಧ್ಯಮಿಕ ಶಾಲೆಗಳು ಮರು ಆರಂಭವಾಗಲಿವೆ ಎಂದು ತಿಳಿಸಿದ್ದರು. ಕಳೆದ ಒಂದು ವಾರದಲ್ಲಿ ಶಿಕ್ಷಕರ ಹಾಜರಾತಿಯಲ್ಲಿ ಗಮನಾರ್ಹ ಸುಧಾರಣೆ ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News