ಐಐಟಿಯಲ್ಲಿ ನನ್ನ ಪುತ್ರ, ಟೈಲರ್ ಮಗನನ್ನು ಒಟ್ಟಾಗಿ ನೋಡಿದಾಗ ಸಂತಸವಾಗುತ್ತದೆ: ಅರವಿಂದ ಕೇಜ್ರಿವಾಲ್

Update: 2019-08-28 17:24 GMT

ಹೊಸದಿಲ್ಲಿ, ಆ. 28: ದಿಲ್ಲಿ ಸರಕಾರದ ಉಚಿತ ತರಬೇತಿ ಕಾರ್ಯಕ್ರಮದಿಂದ ಟೈಲರ್‌ನ ಮಗನೋರ್ವ ಐಐಟಿ ಪ್ರವೇಶ ಪರೀಕ್ಷೆ ಉತ್ತೀರ್ಣನಾಗಿರುವ ಬಗ್ಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

“ನನ್ನ ಪುತ್ರ ಕೂಡ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಅಲ್ಲದೆ ನನ್ನ ಪುತ್ರ ಟೈಲರ್‌ನ ಮಗನೊಂದಿಗೆ ಒಂದೇ ಐಐಟಿಯಲ್ಲಿ ಶಿಕ್ಷಣ ಪಡೆದುಕೊಳ್ಳಲಿದ್ದಾರೆ. ಇದು ನನಗೆ ಹೆಮ್ಮೆ ಅನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

 ‘‘ವಿಜಯ್ ಕುಮಾರ್‌ನ ತಂದೆ ಟೈಲರ್ ಹಾಗೂ ಆತನ ತಾಯಿ ಗೃಹಿಣಿ. ದಿಲ್ಲಿ ಸರಕಾರ ಉಚಿತ ತರಬೇತಿ ನೀಡಿದ ಬಳಿಕ ಆತ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದ ಎಂಬುದು ನನಗೆ ಹೆಮ್ಮೆಯಾಗುತ್ತಿದೆ. ಬಾಬಾ ಸಾಹೇಬ್ ಅವರ ಈ ಆಕಾಂಕ್ಷೆ ದಿಲ್ಲಿ ಸರಕಾರದಿಂದ ಈಡೇರಿದೆ’’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಜೈ ಭೀಮ್ ಮುಖ್ಯಮಂತ್ರಿ ಪ್ರತಿಭಾ ವಿಕಾಸ್ ಯೋಜನೆಯ ಮೊದಲ ಬ್ಯಾಚ್‌ನಲ್ಲಿ ಹೆಸರು ನೋಂದಾಯಿಸಿದ 4,953 ವಿದ್ಯಾರ್ಥಿಗಳಲ್ಲಿ 16 ವರ್ಷದ ಕುಮಾರ್ ಕೂಡ ಸೇರಿದ್ದಾನೆ. ಆತ ಜೆಇಇಯ ಮೊದಲ ಪ್ರಯತ್ನದಲ್ಲೇ ಉತ್ತೀರ್ಣನಾಗಿದ್ದಾನೆ.

ಪ್ರಮುಖ ತರಬೇತಿ ಕೇಂದ್ರಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಆಕಾಂಕ್ಷೆ ಹೊಂದಿರುವ  ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು 2017ರಲ್ಲಿ ಆಪ್ ಸರಕಾರ ಈ ಯೋಜನೆ ಆರಂಭಿಸಿತ್ತು. ‘‘ನನ್ನ ಪುತ್ರ ಹಾಗೂ ಆತನ ಪುತ್ರನ ಒಂದೇ ಸಮಯದಲ್ಲಿ ಐಐಟಿಯಲ್ಲಿ ಶಿಕ್ಷಣ ಪಡೆಯುತ್ತಿರುವುದು ನನಗೆ ತುಂಬಾ ಸಂತಸ ಉಂಟು ಮಾಡುತ್ತಿದೆ. ಉತ್ತಮ ಶಿಕ್ಷಣದ ಕೊರತೆಯ ಕಾರಣಕ್ಕೆ ಬಡವನ ಪುತ್ರ ಬಡವನಾಗಿಯೇ ಉಳಿಯುವ ಸಂಪ್ರದಾಯ ಇದೆ. ಆದರೆ, ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿ ನೀಡುವ ಮೂಲಕ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ತುಂಬಿಸಬಹುದು’’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News