ಮೋದಿ ಸರಕಾರ ‘ಕಂಪೆನಿ ರಾಜ್’ ಅನ್ನು ಸ್ಥಾಪಿಸುತ್ತಿದೆ: ಪ್ರಿಯಾಂಕಾ ಗಾಂಧಿ

Update: 2019-08-28 17:25 GMT

ಲಕ್ನೋ, ಆ. 28: ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಹಾಗೂ ಅದನ್ನು ಆಯ್ಕೆಯ ಉದ್ಯಮಿ ಸ್ನೇಹಿತರಿಗೆ ಹಸ್ತಾಂತರಿಸುವ ಮೂಲಕ ದೇಶದಲ್ಲಿ ‘ಕಂಪೆನಿ ರಾಜ್’ ಅನ್ನು ಸ್ಥಾಪಿಸಲು ಮೋದಿ ಸರಕಾರ ಬಯಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಇದರ ಆರಂಭವಾಗಿ ಕೇಂದ್ರ ಸರಕಾರ ಯುಪಿಎ ಸರಕಾರದ ಅಧಿಕಾರದ ಅವಧಿಯಲ್ಲಿ 2006ರಲ್ಲಿ ಆರಂಭಿಸಲಾದ ರಾಯ್‌ಬರೇಲಿ ಮಾಡರ್ನ್ ಕೋಚ್ ಫ್ಯಾಕ್ಟರಿಯನ್ನು ನಿಗಮವನ್ನಾಗಿ ಪರಿವರ್ತಿಸಲು ನಿರ್ಧರಿಸಿದೆ. ಅದರ ಮುಂದಿನ ನಡೆ ಅದನ್ನು ಖಾಸಗೀಕರಿಸುವುದು ಎಂದು ಪ್ರಿಯಾಂಕಾ ಪ್ರತಿಪಾದಿಸಿದ್ದಾರೆ.

ರಾಯಬರೇಲಿಗೆ ಒಂದು ದಿನದ ಪ್ರವಾಸದಲ್ಲಿ ಪ್ರಿಯಾಂಕಾ ಗಾಂಧಿ ರೈಲ್ ಕೋಚ್ ಫ್ಯಾಕ್ಟರಿಯನ್ನು ನಿಗಮವನ್ನಾಗಿ ಪರಿವರ್ತಿಸುವ ಕೇಂದ್ರದ ನಿರ್ಧಾರದ ವಿರುದ್ಧ ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಫ್ಯಾಕ್ಟರಿ ಕಾರ್ಮಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಫ್ಯಾಕ್ಟರಿಯ ಗೇಟ್‌ನಲ್ಲಿ ಸೇರಿದ್ದ ಪ್ರತಿಭಟನೆ ನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ದೇಶವನ್ನು ಸಬಲಗೊಳಿಸಲು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಆರಂಭಿಸಲಾಗಿತ್ತು. ಆದರೆ, ಮೋದಿ ಅದನ್ನು ನಾಶಗೊಳಿಸುತ್ತಿದ್ದಾರೆ. ಇದು ದೇಶಕ್ಕೆ ಉತ್ತಮವಲ್ಲ ಎಂದರು.

ರೈಲ್ವೆ ಜನರಿಗೆ ಉದ್ಯೋಗ ನೀಡುವುದು ಮಾತ್ರವಲ್ಲ, ದೇಶವನ್ನು ಏಕೀಕರಿಸುತ್ತದೆ. ಕೇಂದ್ರ ಸರಕಾರ ದೇಶವನ್ನು ಒಡೆಯುತ್ತಿದೆ ಹಾಗೂ ಇಂತಹ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಮೂಲಕ ದೇಶವನ್ನು ಟೊಳ್ಳಾಗಿಸುತ್ತಿದೆ ಎಂದು ಅವರು ಹೇಳಿದರು. ಒಂದೆಡೆ ಲಕ್ಷಾಂತರ ಉದ್ಯೋಗ ನಷ್ಟದೊಂದಿದೆ ದೇಶದ ಆರ್ಥಿಕಕತೆ ಮಂದಗತಿಯಲ್ಲಿ ಸಾಗುತ್ತಿದೆ. ಇನ್ನೊಂದೆಡೆ ಕೇಂದ್ರ ಸರಕಾರ ಲಾಭ ತರುವ ಹಾಗೂ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಕೋಚ್‌ಗಳನ್ನು ನಿರ್ಮಿಸುತ್ತಿರುವ ರೈಲ್ ಕೋಚ್ ಫ್ಯಾಕ್ಟರಿಯನ್ನು ಖಾಸಗೀಕರಿಸಲು ಪ್ರಯತ್ತಿಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News