ಸುರತ್ಕಲ್ ರವಿವಾರ ಸಂತೆ ರದ್ದುಪಡಿಸದಂತೆ ಇಂಟಕ್, ಸಂತೆ ವ್ಯಾಪಾರಿಗಳ ಹಕ್ಕೊತ್ತಾಯ

Update: 2019-08-28 17:27 GMT

ಸುರತ್ಕಲ್,ಆ.28: ಕಳೆದ ಇಪ್ಪತ್ತು ವರ್ಷಗಳಿಂದ ಸುರತ್ಕಲ್‌ನಲ್ಲಿ ರವಿವಾರದ ಸಂತೆ ನಡೆಯುತ್ತಾ ಬರುತ್ತಿದ್ದು ಇದೀಗ ಮಂಗಳೂರು ಮಹಾನಗರ ಪಾಲಿಕೆಯು ಕಡ್ಡಾಯವಾಗಿ ಸಂತೆ ರದ್ದುಗೊಳಿಸಲು ಮುಂದಾಗಿರುವುದಕ್ಕೆ ಇಂಟಕ್ ಹಾಗೂ ಸಂತೆ ವ್ಯಾಪಾರಿಗಳ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಸಂತೆ ವ್ಯಾಪಾರದ ಸ್ಥಳದಲ್ಲಿ ಬುಧವಾರ ಹಕ್ಕೊತ್ತಾಯ ಮಂಡನೆ ನಡೆಸಿತು.

ಸಭೆಯಲ್ಲಿ ಮಾತನಾಡಿದ ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ ಕಳೆದ 50 ವರ್ಷಗಳಿಂದ ಸಂತೆಯಿದೆ. 20 ವರ್ಷಗಳಿಂದ ಎಂಆರ್‌ಪಿಎಲ್ ಆರಂಭವಾದಾಗಿನಿಂದ ಕಾರ್ಮಿಕರ ಅನುಕೂಲಕ್ಕಾಗಿ ಈ ಸಂತೆ ಕರಾರುವಕ್ಕಾಗಿ ನಡೆಯುತ್ತಾ ಬರುತ್ತಿದೆ. ರಜಾದಿನ ಕಾರ್ಮಿಕರಿಗೆ ರವಿವಾರದ ಸಂತೆ ಸೂಕ್ತವಾಗಿದೆ. ಯಾವ ಕಾರಣಕ್ಕೂ ಇದನ್ನು ರದ್ದು ಪಡಿಸಬಾರದು. ಶುಚಿತ್ವ ಕಾಪಾಡಲು ಡಸ್ಟ್ ಬಿನ್ ನೀಡಲಾಗಿದೆ. ಇಂಟಕ್ ಸಂಘಟನೆಯಡಿ ಶಿಸ್ತು ಬದ್ದವಾಗಿ ಸಂತೆ ನಡೆಸಲಾಗುತ್ತಿದೆ. ಶಾಸಕ ಡಾ.ಭರತ್ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ ಸಂತೆ ರದ್ದು ಪಡಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೂ ಪಾಲಿಕೆಯ ಆಯುಕ್ತರು ಸಂತೆ ರದ್ದುಪಡಿಸಲು ಮುಂದಾಗಿದ್ದು ಸರಿಯಲ್ಲ ಎಂದರು.

ರಾಜ್ಯ ಇಂಟಕ್ ಕಾರ್ಯದರ್ಶಿ ,ಬಂದರು ಟ್ರಸ್ಟಿ ಅಬೂಬಕರ್ ಮಾತನಾಡಿ, ಸಂತೆ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತಾತ್ಕಾಲಿಕ ಮಾರುಕಟ್ಟೆ ಮುಂಭಾಗದಲ್ಲಿ ಸ್ಥಳಾವಕಾಶ ನೀಡಲಾಗಿತ್ತು. ಎರಡು ದಿನದ ವ್ಯಾಪಾರದಿಂದ ಬರುವ ಹಣದಲ್ಲಿ ಈ ವ್ಯಾಪಾರಿಗಳು ಜೀವನ ಸಾಗಿಸುತ್ತಿದ್ದಾರೆ. ಸ್ಥಾಪಿತ ಹಿತಾಸಕ್ತಿಗಳು ಸಂತೆ ರದ್ದಿಗೆ ಯತ್ನಿಸುವ ಮೂಲಕ ಬಡವರನ್ನು ಬೀದಿಗೆ ತಳ್ಳಬಾರದು. ಇಂಟಕ್ ಯಾವುದೇ ಕುಂದು ಕೊರತೆ ಇದ್ದರೂ ಸರಿಪಡಿಸುತ್ತದೆ. ಹೀಗಾಗಿ ರವಿವಾರದ ಸಂತೆ ರದ್ದು ಪಡಿಸಬಾರದು ಎಂದು ಆಗ್ರಹಿಸಿದರು.

ರಾಜ್ಯ ಇಂಟಕ್ ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ.ಕೆ., ಮುಖಂಡರಾದ ಫಾರೂಕ್, ವಿನೋದ್ ಪಣಂಬೂರು, ಸಂತೆ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News