×
Ad

ಪಾದುವ ಕಾಲೇಜು: ನಟನಾ ಕಾರ್ಯಗಾರ ಯಶಸ್ವಿ

Update: 2019-08-28 23:34 IST

ಮಂಗಳೂರು: ಪಾದುವ ಕಾಲೇಜಿನಲ್ಲಿ ನಡೆಯುತ್ತಿರುವ ನೂರು ದಿನಗಳ ರಂಗಭೂಮಿ ಕಾರ್ಯಗಾರ ನಿಮಿತ್ತ ಹಮ್ಮಿಕೊಳ್ಳಲಾದ ನಟನಾ ಕಾರ್ಯಗಾರ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು. ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಇಲ್ಲಿನ ಪದವೀಧರರಾದ, ಮೂಲತಃ ತಮಿಳುನಾಡಿನವರಾದ ಶ್ರೀ. ತಿರುನಾವುಕ್ಕರಸು ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ನಟನೆಯಲ್ಲಿನ ಹಲವು ಆಯಾಮಗಳ ಬಗ್ಗೆ, ನವರಸಗಳ ಅಧ್ಯಯನ, ಆಶು ವಿಸ್ತರಣೆಯ ಪ್ರಯೋಗ ಹೀಗೆ ಹಲವು ವಿಚಾರಗಳ ಮೇಲೆ ಪ್ರಾತ್ಯಕ್ಷಿಕವಾಗಿ ವಿವರವನ್ನು ಅವರು ನೀಡಿದರು. ರಂಗ ಕಾರ್ಯಗಾರದ ವಿಧ್ಯಾರ್ಥಿಗಳಲ್ಲದೇ, ಸಿನೆಮಾ ನಟನೆಯಲ್ಲಿ ಆಸಕ್ತಿ ಇದ್ದವರೂ ಈ ಒಂದು ವಾರದ ಶಿಬಿರದಲ್ಲಿ ಸಹಭಾಗಿಗಳಾಗಿದ್ದರು. ಕರ್ನಾಟಕದ ನೀನಾಸಮ್, ರಾಷ್ಟ್ರೀಯ ನಾಟಕ ಶಾಲೆ ದೆಹಲಿ, ಈ ಎರಡೂ ರಂಗಶಾಲೆಗಳ ಪದವೀಧರರಾದ ಅರಸುರವರು, ಕೆಲವು ತಮಿಳು ಸಿನೆಮಾಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ತೋರ್ಪಡಿಸಿದ್ದಾರೆ.

ತಮಿಳು ಸಿನೆಮಾ ಕ್ಷೇತ್ರದಲ್ಲೂ ನಟನಾ ಕಾರ್ಯಗಾರಗಳನ್ನು ನಡೆಸುತ್ತಾರೆ. ಭಾಗವಹಿಸಿದ ಶಿಬಿರಾರ್ಥಿಗಳು ನಟನಾ ಕ್ಷೇತ್ರದ ಒಂದು ಹೊಸದಾದ ಆಯಾಮವನ್ನು ಕಲಿತ ಅನುಭವವನ್ನು ವಿನಿಮಯ ಮಾಡಿಕೊಂಡರು. ನೂರು ದಿನದ ರಂಗ ಕಾರ್ಯಗಾರದ ಹಲವು ಚಟುವಟಿಕೆಗಳಲ್ಲಿ ಈ ಒಂದು ನಟನಾ ತರಬೇತಿಯು ಒಂದಾಗಿದ್ದು, ಇದನ್ನು ಪಾದುವ ಕಾಲೇಜು ಅಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇದರ ನಾಟಕ ತಂಡವಾದ ಪಾದುವ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ (ರಿ.) ಮಂಗಳೂರು ಜಂಟಿಯಾಗಿ ಆಯೋಜಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News