×
Ad

ಕರ್ತವ್ಯಕ್ಕೆ ಹಾಜರಾಗಿ: ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಗೆ ಆದೇಶ

Update: 2019-08-29 12:55 IST

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನಿರಾಕರಿಸಿರುವುದನ್ನು ಪ್ರತಿಭಟಿಸಿ ತಮ್ಮ ಹುದ್ದೆ ತೊರೆದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರಿಗೆ ಕೂಡಲೇ  ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಕಣ್ಣನ್ ಸಲ್ಲಿಸಿದ ರಾಜೀನಾಮೆ ಅಂಗೀಕಾರಗೊಳ್ಳುವ ತನಕ ಅವರು ಕರ್ತವ್ಯದಲ್ಲಿ ಮುಂದುವರಿಯಬೇಕೆಂದು ಅವರಿಗೆ ಆದೇಶಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶಗಳಾದ ಡಾಮನ್ ಹಾಗೂ ಡಿಯು, ದಾದ್ರ ಮತ್ತು ನಾಗರ್ ಹವೇಲಿಯಲ್ಲಿ ಇಂಧನ ಇಲಾಖೆಯ ಕಾರ್ಯದರ್ಶಿಯಾಗಿದ್ದ ಕಣ್ಣನ್ (33) ತಮ್ಮ ರಾಜೀನಾಮೆಯನ್ನು ಗೃಹ ಸಚಿವಾಲಯಕ್ಕೆ ಆಗಸ್ಟ್ 21ರಂದು ಸಲ್ಲಿಸಿದ್ದರು. ಇದೀಗ ಡಾಮನ್ ಡಿಯು ಕೇಂದ್ರಾಡಳಿತ ಪ್ರದೇಶದ ಸಿಬ್ಬಂದಿ ಇಲಾಖೆ ಅವರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಸರಕಾರಿ ಅಧಿಕಾರಿಯೊಬ್ಬರ ರಾಜೀನಾಮೆ ಅದು ಅಂಗೀಕಾರಗೊಂಡ ನಂತರ ಊರ್ಜಿತವಾಗುತ್ತದೆ ಎಂದು ಸಿಬ್ಬಂದಿ ಇಲಾಖೆಯ ಅಧೀನ ಕಾರ್ಯದರ್ಶಿ ಗುರ್‍ಪ್ರೀತ್ ಸಿಂಗ್ ಅವರು ಆಗಸ್ಟ್ 27ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.

ಕಣ್ಣನ್ ಅವರು ಸಿಲ್ವಸ್ಸದಲ್ಲಿಲ್ಲದೇ ಇದ್ದುದರಿಂದ ಇಲಾಖೆಯ ನೋಟಿಸನ್ನು ಅವರು ವಾಸಿಸುವ ಸರಕಾರಿ ಗೆಸ್ಟ್ ಹೌಸ್ ಬಾಗಿಲಿನಲ್ಲಿ ಅಂಟಿಸಲಾಗಿದೆ. ನೋಟಿಸ್ ಬಂದಿರುವ ಬಗ್ಗೆ ತಿಳಿದಿದೆ ಎಂದಿರುವ ಕಣ್ಣನ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. 

ಕಳೆದ ವಾರ ರಾಜೀನಾಮೆ ನೀಡಿದ ನಂತರ ಗೃಹ ಸಚಿವಾಲಯ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು. ತಮ್ಮ ರಾಜೀನಾಮೆ ಪತ್ರದಲ್ಲಿ ಅವರು ಕಾಶ್ಮೀರ ವಿಚಾರ ಉಲ್ಲೇಖಿಸಿಲ್ಲ.

ಕೇರಳದ ಕೊಟ್ಟಾಯಂ ಜಿಲ್ಲೆಯವರಾದ ಕಣ್ಣನ್ ರಾಜೀನಾಮೆ ನೀಡಿದ ನಂತರ ಮಾತನಾಡಿ, 370ನೇ ವಿಧಿ ರದ್ದುಗೊಳಿಸುವುದು ಸರಕಾರದ ಹಕ್ಕಾದರೂ ಅದಕ್ಕೆ ಪ್ರತಿಕ್ರಿಯಿಸುವುದು ಪ್ರಜಾಪ್ರಭುತ್ವದಲ್ಲಿ ಜನರಿಗಿರುವ ಹಕ್ಕಾಗಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News