ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ ಏರ್‌ಇಂಡಿಯಾ

Update: 2019-08-29 14:14 GMT

ಹೊಸದಿಲ್ಲಿ, ಆ.29: ಅಕ್ಟೋಬರ್ 2ರಿಂದ ವಿಮಾನದ ಒಳಗೆ ಏಕ ಬಳಕೆ ಪ್ಲಾಸ್ಟಿಕ್ ಬಳಕೆಗೆ ನಿಷೇಧ ವಿಧಿಸಲು ಏರ್‌ಇಂಡಿಯಾ ನಿರ್ಧರಿಸಿದೆ.

ಆರಂಭದಲ್ಲಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಅಲಯನ್ಸ್ ವಿಮಾನದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಾಗುತ್ತದೆ. ಮುಂದಿನ ಹಂತದಲ್ಲಿ ಎಲ್ಲಾ ಏರ್‌ಇಂಡಿಯಾ ವಿಮಾನಗಳಲ್ಲೂ ನಿಷೇಧ ಜಾರಿಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ಲಾಸ್ಟಿಕ್‌ನ ಚಹಾದ ಲೋಟ ಹಾಗೂ ತಟ್ಟೆಯ ಬದಲು ದಪ್ಪದ ಪೇಪರ್ ತಟ್ಟೆ ಮತ್ತು ಲೋಟಗಳನ್ನು ಬಳಸಲಾಗುವುದು. ಹಗುರ ತೂಕದ ಸ್ಟೀಲ್ ಬಳಸಿ ಮಾಡಿರುವ ಊಟದ ತಟ್ಟೆ ಹಾಗೂ ಜೊತೆಗೆ ನೀಡುವ ಕತ್ತರಿ, ಚಮಚ, ಫೋರ್ಕ್ ಮತ್ತಿತರ ಸಾಧನಗಳನ್ನು ಬಳಸಲಾಗುವುದು. ಖಾದ್ಯಗಳನ್ನು ಮುಚ್ಚಲು ಪ್ಲಾಸ್ಟಿಕ್ ಬಳಸುವುದಿಲ್ಲ. ಬಾಳೆಹಣ್ಣಿನ ಚಿಪ್ಸ್ ಹಾಗೂ ಸ್ಯಾಂಡ್‌ವಿಚ್‌ಗಳನ್ನು ಪ್ಲಾಸ್ಟಿಕ್ ಪೌಚ್ ಬದಲು ಬಟರ್‌ಪೇಪರ್‌ನಲ್ಲಿ ಮುಚ್ಚಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಭಾರತವನ್ನು ಏಕಬಳಕೆಯ ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಬೃಹತ್ ಅಭಿಯಾನ ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಏರ್‌ಇಂಡಿಯಾ ಸಂಸ್ಥೆಯೂ ಅಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News