×
Ad

ಪೆನ್ಸಿಲ್ ತಯಾರಿಕಾ ಘಟಕದಿಂದ ವಂಚನೆ ಆರೋಪ: ನ್ಯಾಯ ಒದಗಿಸಲು ಡಿವೈಎಫ್ಐ ಆಗ್ರಹ

Update: 2019-08-30 18:51 IST

ಮಂಗಳೂರು, ಆ.30: ಪೆನ್ಸಿಲ್ ತಯಾರಿಕಾ ಘಟಕದಿಂದ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಅವರಿಗೆ ಡಿವೈಎಫ್‌ಐ (ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್) ದ.ಕ. ಜಿಲ್ಲಾ ಸಮಿತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಪುತ್ತೂರು ತಾಲೂಕಿನ ಕಬಕದಲ್ಲಿ ಕಳೆದ 10 ತಿಂಗಳ ಹಿಂದೆ ಪ್ರಾರಂಭಗೊಂಡ ಕೇರಳ ಮನುಚಂದ್ರ ಮಾಲಕತ್ವದ ಬದ್ರಿನಾಥ ಎಂಟರ್‌ಪ್ರೈಸಸ್ ಪೆನ್ಸಿಲ್ ತಯಾರಿಕಾ ಸಂಸ್ಥೆಯು ಜಿಲ್ಲೆಯ ಜನತೆಗೆ ಮೋಸ ಮಾಡಿದೆ. ಸ್ವಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜಿಲ್ಲೆಯ ನೂರಾರು ಜನರಿಂದ ತಲಾ 80 ಸಾವಿರ ರೂ.ಯಂತೆ ಪಡೆದು ಉಪಯೋಗಕ್ಕೆ ಬಾರದ ‘ವೆಲ್‌ವೆಟ್ ಪೆನ್ಸಿಲ್ ಮೆಷಿನ್’ ನೀಡುವ ಮೂಲಕ ಕೋಟ್ಯಂತರ ರೂ. ವಂಚಿಸಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಸಂಸ್ಥೆಯು ಕಳೆದ ಒಂದು ವರ್ಷದಿಂದ ಸ್ಥಳೀಯ ಏಜೆಂಟರುಗಳ ಮೂಲಕ ಜಿಲ್ಲೆಯ ಜನರಿಗೆ ಸ್ವಂತ ಸ್ಥಳದಲ್ಲೇ ಸ್ವಉದ್ಯೋಗ ಮಾಡಿ ತಿಂಗಳಿಗೆ ಸುಮಾರು 20 ಸಾವಿರದಷ್ಟು ದುಡಿಯಬಹುದು ಎಂಬ ಆಸೆ ಹುಟ್ಟಿಸಿದ್ದಾರೆ. ಇದನ್ನು ನಂಬಿದ ಜನ ಸಾಲಸೋಲ ಮಾಡಿ, ಆಸ್ತಿ-ಪಾಸ್ತಿ ಅಡವಿಟ್ಟು ಈ ಪೆನ್ಸಿಲ್ ಮೆಷಿನ್ ಖರೀದಿಸಿದ್ದಾರೆ. ಆದರೆ ಈ ಮೆಷಿನ್‌ನ ನೈಜ ಬೆಲೆ ಕೇವಲ 15 ಸಾವಿರ ರೂ. ಮಾತ್ರ. ಕಂಪೆನಿಯು ಸಂತ್ರಸ್ತರಿಂದ ನಾಲ್ಕು ಪಟ್ಟು ಹೆಚ್ಚು ಹಣ ವಸೂಲಿ ಮಾಡಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಮೆಷಿನ್ ಖರೀದಿಸಿದ ಸಂತ್ರಸ್ತರಿಗೆ ಒಂದೆಡೆ ಕೆಲಸವೂ ಇಲ್ಲ; ಮತ್ತೊಂದೆಡೆ ತಾವು ಹೂಡಿದ ಹಣವೂ ಬಾರದೆ ಸಂಕಷ್ಟಕ್ಕೊಳಗಾಗಿದ್ದಾರೆ. ಜಿಲ್ಲೆಯ ಜನತೆಗಾದ ಅನ್ಯಾಯದ ಕುರಿತು ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ, ಕಂಪೆನಿಯ ಮಾಲಕ ತಲೆಮರೆಸಿಕೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಂಚಕ ಮನುಚಂದ್ರನಿಗೆ ಹಲವರು ಸಹಕಾರ ನೀಡಿ ರಾಜಕೀಯ ಪ್ರಭಾವ ಬಳಸಿ ರಕ್ಷಣೆ ಮಾಡುತ್ತಿದ್ದಾರೆ. ಆತನಿಗೆ ಸಹಕಾರ ನೀಡದವರಾದ ಶೇಖ್ ಮುಹಮ್ಮದ್ ಇರ್ಫಾನಿ, ಹಂಝ ಕಬಕ, ಇಜಾಜ್, ಕಲಂದರ್, ಸಿದ್ದೀಕ್ ಎಂಬವರು ಈ ಅವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಆರೋಪಿಗಳ ವಿರುದ್ಧ ಇಲ್ಲಿಯವರೆಗೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಕನಿಷ್ಠ ತನಿಖೆಗೂ ಒಳಪಡಿಸದಿರುವುದು ಖೇದ ಹುಟ್ಟಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸುವ ನಿಯೋಗದಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಸಂತ್ರಸ್ತರಾದ ಅಶ್ರಫ್ , ಸಿದ್ದಿಕ್, ನಝೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News