×
Ad

ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ರಾಜೀನಾಮೆ

Update: 2019-08-30 19:20 IST

ಹೊಸದಿಲ್ಲಿ, ಆ.30: ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಆಪ್ತ ಸಹಾಯಕರಲ್ಲೋರ್ವ ಹಾಗೂ 2014ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ತಂಡದ ಸದಸ್ಯರಾಗಿದ್ದ ನೃಪೇಂದ್ರ ಮಿಶ್ರಾ ಅವರು ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಮೋದಿಯವರ ಮನವಿಯ ಮೇರೆಗೆ ಇನ್ನೂ ಎರಡು ವಾರ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

‘ಮಿಶ್ರಾ ಅತ್ಯಂತ ಸಮರ್ಥ ಅಧಿಕಾರಿಗಳಲ್ಲೊಬ್ಬರಾಗಿದ್ದು, ಸರಕಾರಿ ನೀತಿ ಮತ್ತು ಆಡಳಿತದ ಬಗ್ಗೆ ಆಳವಾದ ಗ್ರಹಿಕೆ ಹೊಂದಿದ ವ್ಯಕ್ತಿಯಾಗಿದ್ದಾರೆ. “2014ರಲ್ಲಿ ನಾನು ದಿಲ್ಲಿಗೆ ಹೊಸಬನಾಗಿದ್ದಾಗ ಅವರು ನನಗೆ ಬಹಳಷ್ಟನ್ನು ಕಲಿಸಿದ್ದರು ಮತ್ತು ಅವರ ಮಾರ್ಗದರ್ಶನ ಅತ್ಯಂತ ಅಮೂಲ್ಯವಾಗಿರಲಿದೆ. ಐದು ವರ್ಷಗಳ ಕಾಲ ಪ್ರಧಾನಿ ಕಚೇರಿಯಲ್ಲಿ ನಿಷ್ಠೆ ಮತ್ತು ಶ್ರದ್ಧೆಯಿಂದ ಸೇವೆ ಸಲ್ಲಿಸಿದ ಮತ್ತು ಭಾರತದ ಅಭಿವೃದ್ಧಿ ಪಥಕ್ಕೆ ಅಚ್ಚಳಿಯದ ಕೊಡುಗೆಯನ್ನು ಸಲ್ಲಿಸಿದ ಬಳಿಕ ಮಿಶ್ರಾ ಅವರು ತನ್ನ ಬದುಕಿನ ಹೊಸ ಘಟ್ಟವನ್ನು ಆರಂಭಿಸುತ್ತಿದ್ದಾರೆ. ಅವರ ಭವಿಷ್ಯ ಜೀವನಕ್ಕೆ ನನ್ನ ಶುಭ ಹಾರೈಕೆಗಳು” ಎಂದು ಮೋದಿ ಟ್ವೀಟಿಸಿದ್ದಾರೆ.

ಮಿಶ್ರಾ (74) ಚುನಾವಣೆಗಳು ಮುಗಿದ ಬೆನ್ನಿಗೇ ರಾಜೀನಾಮೆಯನ್ನು ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು, ಆದರೆ ತನ್ನ ಕೋರಿಕೆಯ ಮೇರೆಗೆ ಹುದ್ದೆಯಲ್ಲಿ ಮುಂದುವರಿದಿದ್ದರು ಎಂದೂ ಮೋದಿ ತಿಳಿಸಿದ್ದಾರೆ.

ದೇಶದ ಅತ್ಯಂತ ಪ್ರಭಾವಿ ಅಧಿಕಾರಿಗಳಲ್ಲೋರ್ವರು ಎಂದು ಪರಿಗಣಿಸಲಾದ ಮಿಶ್ರಾ ಉ.ಪ್ರ.ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು ಟ್ರಾಯ್ ಅಧ್ಯಕ್ಷ, ದೂರಸಂಪರ್ಕ ಕಾರ್ಯದರ್ಶಿ ಮತ್ತು ರಸಗೊಬ್ಬರ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಿಶ್ರಾ ಪ್ರಧಾನಿ ಕಚೇರಿಗೆ ಸೇರ್ಪಡೆಗೊಂಡಾಗ ಅವರಿಗೆ ಸಂಪುಟ ಸಚಿವ ದರ್ಜೆ ನೀಡಲಾಗಿತ್ತು.ನಿವೃತ್ತಿಯ ಬಳಿಕ ಅವರು ಮತ್ತೆ ಸರಕಾರಿ ಸೇವೆಗೆ ಸೇರುವಂತಾಗಲು ಟ್ರಾಯ್ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News