ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಕೋರ್ಟ್ ನಲ್ಲಿ ಸ್ವತಃ ವಾದಿಸಿದ ಚಿದಂಬರಂ ಹೇಳಿದ್ದಿಷ್ಟು…

Update: 2019-08-30 14:43 GMT

ಹೊಸದಿಲ್ಲಿ,ಆ.30: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಸಿಬಿಐ ಕಸ್ಟಡಿಯನ್ನು ಶುಕ್ರವಾರ ಇಲ್ಲಿಯ ವಿಶೇಷ ನ್ಯಾಯಾಲಯವು ಸೆ.2,ಸೋಮವಾರದವರೆಗೆ ವಿಸ್ತರಿಸಿದೆ.

ಚಿದಂಬರಂ 2007ರಲ್ಲಿ ವಿತ್ತ ಸಚಿವರಾಗಿದ್ದಾಗ ಪುತ್ರ ಕಾರ್ತಿ ಚಿದಂಬರಂ ಒತ್ತಾಸೆಯ ಮೇರೆಗೆ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಗೆ ಭಾರೀ ಮೊತ್ತದ ವಿದೇಶಿ ನಿಧಿ ಹರಿದು ಬರಲು ಅನುಕೂಲವನ್ನು ಕಲ್ಪಿಸಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಪ್ರಕರಣದಲ್ಲಿ ಕಾರ್ತಿ ಕೂಡ ಆರೋಪಿಯಾಗಿದ್ದು,ಜಾಮೀನಿನಲ್ಲಿ ಹೊರಗಿದ್ದಾರೆ. ಕಳೆದ ವಾರ ಚಿದಂಬರಂ ಅವರನ್ನು ಬಂಧಿಸಲಾಗಿದ್ದು,ಆಗಿನಿಂದಲೂ ಅವರು ಸಿಬಿಐ ಕಸ್ಟಡಿಯಲ್ಲಿದ್ದಾರೆ.

ಚಿದಂಬರಂ ಪ್ರಶ್ನೆಗಳಿಂದ ನುಣುಚಿಕೊಳ್ಳುತ್ತಿದ್ದಾರೆ ಮತ್ತು ತನಿಖೆಗೆ ಸಹಕರಿಸುತ್ತಿಲ್ಲ. ಅವರನ್ನು ದಾಖಲೆಗಳು ಮತ್ತು ಪ್ರಕರಣದ ಇತರ ಆರೋಪಿಗಳೊಂದಿಗೆ ಮುಖಾಮುಖಿಯಾಗಿಸಬೇಕಿದೆ,ಹೀಗಾಗಿ ಅವರ ಕಸ್ಟಡಿಯನ್ನು ವಿಸ್ತರಿಸುವಂತೆ ಸಿಬಿಐ ನ್ಯಾಯಾಲಯವನ್ನು ಕೋರಿತು.

 ಸಿಬಿಐ ವಾದ ಅತ್ಯಂತ ದುರ್ಬಲವಾಗಿದೆ ಎಂದು ಹರಿಹಾಯ್ದ ನ್ಯಾಯಾಧೀಶರು,ಮೊದಲೇ ಏಕೆ ಸಾಕಷ್ಟು ಕಸ್ಟಡಿ ಅವಧಿಯನ್ನು ಕೋರಿರಲಿಲ್ಲ ಎಂದು ಪ್ರಶ್ನಿಸಿದರು. ಸಿಬಿಐ ಶುಕ್ರವಾರ ಎರಡನೇ ಬಾರಿ ಕಸ್ಟಡಿ ವಿಸ್ತರಣೆಗೆ ಕೋರಿತ್ತು.

ಚಿದಂಬರಂ ಅವರನ್ನು ಪ್ರತಿ ದಿನ 8-10 ಗಂಟೆಗಳ ಕಾಲ ಪ್ರಶ್ನಿಸಲಾಗುತ್ತಿದೆ ಮತ್ತು ತನಿಖೆಯು ನಿರಂತರವಾಗಿ ನಡೆಯುತ್ತಿದೆ ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್.ನಾಗರಾಜ ತಿಳಿಸಿದಾಗ,ಈ ತನಿಖೆಯು ತಿಂಗಳುಗಟ್ಟಲೆ ಮುಂದುವರಿಯಲಿದೆಯೇ ಎಂದೂ ನ್ಯಾಯಾಧೀಶರು ಪ್ರಶ್ನಿಸಿದರು.

ಸಿಬಿಐ ತನ್ನನ್ನು 55 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದೆ ಮತ್ತು ಸುಮಾರು 400 ಪ್ರಶ್ನೆಗಳನ್ನು ಕೇಳಿದೆ ಎಂದು ಚಿದಂಬರಂ ನ್ಯಾಯಾಲಯಕ್ಕೆ ತಿಳಿಸಿದರು.

ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ವಕೀಲರು ತಾನು ಸೆ.2ರವರೆಗೆ ಸಿಬಿಐ ಕಸ್ಟಡಿಯಲ್ಲಿ ಉಳಿಯಲು ಸಿದ್ಧನಿದ್ದೇನೆ ಎಂಬ ಕೊಡುಗೆಯನ್ನು ಮುಂದಿರಿಸಿದ್ದು ತನಗೆ ಅಸಮಾಧಾನವನ್ನುಂಟು ಮಾಡಿದೆ ಎಂದ ಅವರು,ತನ್ನ ಕಸ್ಟಡಿಯನ್ನು ಮುಂದುವರಿಸಲು ಯಾವುದೇ ಸಮರ್ಥನೆಗಳಿಲ್ಲ ಎಂದು ವಾದಿಸಿದರು. ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದಿದ್ದು ತನ್ನ ವಕೀಲರು ಮತ್ತು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ನಡುವಿನ ವಾದವಿವಾದವಾಗಿತ್ತು ಎಂದರು.

ಚಿದಂಬರಂ ಸ್ವತಃ ವಾದ ಮಂಡಿಸುತ್ತಿರುವುದನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಕ್ಷೇಪಿಸಿದಾಗ,ಅದಕ್ಕೆ ನಿಮ್ಮ ಅಪ್ಪಣೆ ಬೇಕಿಲ್ಲ,ನ್ಯಾಯಾಲಯವು ನೋಡಿಕೊಳ್ಳುತ್ತದೆ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News