ಗಡಿಪಾರು ಮಸೂದೆ ಹಿಂದಕ್ಕೆ ಪಡೆಯುವ ಹಾಂಕಾಂಗ್ ಪ್ರಸ್ತಾಪಕ್ಕೆ ಚೀನಾ ತಿರಸ್ಕಾರ

Update: 2019-08-30 15:43 GMT

ಹಾಂಕಾಂಗ್, ಆ. 30: ವಿವಾದಾತ್ಮಕ ಗಡಿಪಾರು ಮಸೂದೆಯನ್ನು ಹಿಂದಕ್ಕೆ ಪಡೆದರೆ ಹಾಂಕಾಂಗ್‌ನಲ್ಲಿ ನೆಲೆಸಿರುವ ಬಿಕ್ಕಟ್ಟು ಶಮನಗೊಳ್ಳಬಹುದು ಎಂಬ ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್‌ರ ಸಲಹೆಯನ್ನು ಚೀನಾ ಕೇಂದ್ರ ಸರಕಾರ ತಿರಸ್ಕರಿಸಿದೆ.

ಬೇಸಿಗೆಯ ಆದಿ ಭಾಗದಲ್ಲಿ ಕ್ಯಾರೀ ಲ್ಯಾಮ್, ಪ್ರತಿಭಟನಕಾರರ ಐದು ಪ್ರಮುಖ ಬೇಡಿಕೆಗಳ ಬಗ್ಗೆ ತನ್ನ ವಿಶ್ಲೇಷಣೆಯನ್ನೊಳಗೊಂಡ ವರದಿಯೊಂದನ್ನು ಚೀನಾಕ್ಕೆ ಸಲ್ಲಿಸಿದ್ದರು.

ಆದರೆ, ಗಡಿಪಾರು ಮಸೂದೆಯನ್ನು ಹಿಂದಕ್ಕೆ ಪಡೆಯುವ ಲ್ಯಾಮ್‌ರ ಪ್ರಸ್ತಾಪವನ್ನು ಚೀನಾ ಕೇಂದ್ರ ಸರಕಾರ ತಿರಸ್ಕರಿಸಿದೆ ಹಾಗೂ ಪ್ರತಿಭಟನಕಾರರ ಯಾವುದೇ ಬೇಡಿಕೆಗಳಿಗೆ ಮಣಿಯದಂತೆ ಅವರಿಗೆ ಆದೇಶ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸುವಲ್ಲಿ ಹಾಂಕಾಂಗನ್ನು ಚೀನಾ ಹೇಗೆ ನಿಯಂತ್ರಿಸುತ್ತಿದೆ ಎನ್ನುವುದನ್ನು ಇದು ತೋರಿಸಿದೆ.

ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಚೀನಾದ ಕೇಂದ್ರ ಸರಕಾರ ಖಂಡಿಸಿದೆ ಹಾಗೂ ವಿದೇಶಿ ಶಕ್ತಿಗಳು ಹಾಂಕಾಂಗ್‌ನಲ್ಲಿ ಶಾಂತಿ ಕದಡುತ್ತಿವೆ ಎಂದು ಆರೋಪಿಸಿದೆ. ಹಾಂಕಾಂಗ್‌ನಲ್ಲಿ ಹಸ್ತಕ್ಷೇಪ ಮಾಡದಿರುವಂತೆ ಚೀನಾ ವಿದೇಶ ಸಚಿವಾಲಯವು ಇತರ ದೇಶಗಳಿಗೆ ಪದೇ ಪದೇ ಎಚ್ಚರಿಕೆ ನೀಡಿದೆ ಹಾಗೂ ಅಲ್ಲಿನ ಪರಿಸ್ಥಿತಿಯು ‘ಆಂತರಿಕ ವ್ಯವಹಾರ’ವಾಗಿದೆ ಎಂದಿದೆ.

ಪ್ರಜಾಪ್ರಭುತ್ವ ಚಳವಳಿಯ ಪ್ರಮುಖ ನಾಯಕರ ಬಂಧನ

ಹಾಂಕಾಂಗ್‌ನಾದ್ಯಂತ ಶುಕ್ರವಾರ ಪ್ರಮುಖ ಪ್ರಜಾಪ್ರಭುತ್ವಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ನಾಗರಿಕ ಹಕ್ಕುಗಳ ಗುಂಪೊಂದು ಶನಿವಾರ ನಡೆಸಲು ಉದ್ದೇಶಿಸಿದ್ದ ಪ್ರಮುಖ ಸಭೆಯೊಂದನ್ನು ಭದ್ರತಾ ಕಾರಣಕ್ಕಾಗಿ ಪೊಲೀಸರು ನಿಷೇಧಿಸಿದ ಬಳಿಕ, ಚಳವಳಿಯ ನಾಯಕರನ್ನು ವ್ಯಾಪಕವಾಗಿ ಬಂಧಿಸಲಾಗಿದೆ.

ಹಾಂಕಾಂಗ್‌ನಲ್ಲಿ ಮೂರು ತಿಂಗಳಿನಿಂದ ಬೃಹತ್ ಪ್ರಜಾಪ್ರಭುತ್ವಪರ ಪ್ರತಿಭಟನೆಗಳು ನಡೆಯುತ್ತಿದ್ದು, ಚೀನಾದ ಆಳ್ವಿಕೆಯ ನಗರದಲ್ಲಿ ಬಿಕ್ಕಟ್ಟು ನೆಲೆಸಿದೆ.

ಪ್ರತಿಭಟನಕಾರರು ಶನಿವಾರ ಬೃಹತ್ ಸಭೆಯನ್ನು ಆಯೋಜಿಸಿದ್ದರು. ಈ ದಿನವು, ಹಾಂಕಾಂಗ್‌ನಲ್ಲಿ ‘ಸಾರ್ವತ್ರಿಕ ಮತದಾನ’ (ಯನಿವರ್ಸಲ್ ಸಫ್ರಿಜ್)ಕ್ಕೆ ಅವಕಾಶ ಮಾಡಿಕೊಡಬೇಕೆನ್ನುವ ಕರೆಯನ್ನು ಚೀನಾ ತಿರಸ್ಕರಿಸಿದ 5ನೇ ವಾರ್ಷಿಕ ದಿನವೂ ಆಗಿದೆ.

2014ರಲ್ಲಿ ಹಾಂಕಾಂಗ್‌ನಲ್ಲಿ ನಡೆದ 79 ದಿನಗಳ ‘ಕೊಡೆ ಚಳವಳಿ’ಯ ವೇಳೆ ಈ ಸಾರ್ವತ್ರಿಕ ಮತದಾನದ ಬೇಡಿಕೆಯನ್ನು ಇಡಲಾಗಿತ್ತು. ಇಂದು ಅಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ 5 ವರ್ಷಗಳ ಹಿಂದಿನ ಆ ಚಳವಳಿಯೇ ಬುನಾದಿಯಾಗಿದೆ.

ಪೊಲೀಸರು ಸಭೆಯನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ, ಶನಿವಾರ ತಾವು ಪ್ರತಿಭಟನೆ ನಡೆಸುವುದಿಲ್ಲ ಎಂದು ಸಂಘಟಕರು ಶುಕ್ರವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News