×
Ad

ಬ್ಯಾಂಕ್‌ಗಳ ವಿಲೀನ: ಕರಾವಳಿಯಲ್ಲಿ ಭುಗಿಲೆದ್ದ ಆಕ್ರೋಶ

Update: 2019-08-30 21:39 IST

ಮಂಗಳೂರು, ಆ.30: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹುಟ್ಟಿ ಬೆಳೆದ, ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಬ್ಯಾಂಕ್‌ಗಳು ಕ್ರಮೇಣ ಬೇರೊಂದು ಬ್ಯಾಂಕ್‌ಗಳ ಜತೆ ವಿಲೀನವಾಗುತ್ತಿರುವ ಪ್ರಕ್ರಿಯೆಗೆ ಕರಾವಳಿಯ ಜನತೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕರಾವಳಿ ಜಿಲ್ಲೆಗಳ ಮೂರು ಬ್ಯಾಂಕ್‌ಗಳಾದ ಸಿಂಡಿಕೇಟ್, ಕೆನರಾ ಮತ್ತು ಕಾರ್ಪೊರೇಷನ್ ಬ್ಯಾಂಕ್‌ಗಳನ್ನು ವಿಲೀನಗೊಳಿಸುತ್ತಿರುವ ಬಗ್ಗೆ ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎಚ್.ವಿ.ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕರಾವಳಿ ಮೂಲದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಸುದ್ದಿ ಸಂತಸ ಉಂಟು ಮಾಡಿಲ್ಲ. ವಿಲೀನ ಪ್ರಕ್ರಿಯೆ ಹೊಸತೇನಲ್ಲ. ಈ ಮೊದಲಿನಿಂದಲೂ ಇಂತಹ ಪದ್ಧತಿ ನಡೆಯುತ್ತಾ ಬಂದಿದೆ. ಭಾರತವು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲೇ ವಿತ್ತ ಸಚಿವೆಯ ಇಂತಹ ಹೇಳಿಕೆಯು ಆಘಾತ ಉಂಟು ಮಾಡಿದೆ’ ಎಂದರು.

ಕೆಲವೇ ತಿಂಗಳುಗಳ ಹಿಂದೆ ಜಿಲ್ಲೆಯ ಹೆಸರಾಂತ ವಿಜಯಾ ಬ್ಯಾಂಕ್‌ನ್ನು ವಿಲೀನಗೊಳಿಸಲಾಗಿತ್ತು. ಲಾಭದಲ್ಲಿದ್ದ ವಿಜಯ ಬ್ಯಾಂಕ್‌ನ್ನು ನಷ್ಟದಲ್ಲಿದ್ದ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನ ಪ್ರಕ್ರಿಯೆ ನಡೆದಿತ್ತು. ಇದು ಅವಿಭಜಿತ ಜಿಲ್ಲೆಯಲ್ಲಿ ವ್ಯಾಪಕ ಆಕೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಹೊರತುಪಡಿಸಿದಂತೆ ಎಲ್ಲ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ವಿಜಯ ಬ್ಯಾಂಕ್‌ಗಳ ಎಲ್ಲ ಶಾಖೆಗಳ ಎದುರಿನಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News