×
Ad

ನಗರಸಭೆ: ಪ್ಲಾಸ್ಟಿಕ್‌ನಿಂದ ತಯಾರಿಸಿದ ವಸ್ತುಗಳ ಬಳಕೆ ನಿಷೇಧ

Update: 2019-08-30 22:12 IST

ಉಡುಪಿ, ಆ.30: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಪೀಠ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಯಾವುದೇ ವ್ಯಕ್ತಿ, ಅಂಗಡಿ ಮಾಲಕ, ಮಾರಾಟಗಾರ, ಸಗಟು ಮಾರಾಟಗಾರ ಅಥವಾ ಚಿಲ್ಲರೆ ವ್ಯಾಪಾರಿ, ವ್ಯಾಪಾರಿ ಮತ್ತು ಮಾರಾಟಗಾರರು, ಯಾವುದೇ ದಪ್ಪದ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್ಸ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೋಕೂಲ್ ಮತ್ತು ಪ್ಲಾಸ್ಟಿಕ್ ಮೈಕೋ ಬೀಡ್ಸ್‌ನಿಂದ ತಯಾರಾದ ಮೇಲಿನ ವಸ್ತುಗಳ ಬಳಕೆ, ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದ್ದರೂ ಸಹ ಪರಿಣಾಮಕಾರಿ ಯಾಗಿ ಪ್ಲಾಸ್ಟಿಕ್ ಬಳಕೆಯು ನಿಷೇಧವಾಗಿಲ್ಲ.

ಆದ್ದರಿಂದ, ಈ ತಕ್ಷಣ ಅನ್ವಯವಾಗುವಂತೆ ಈ ಮೇಲೆ ತಿಳಿಸಿದ ಪ್ಲಾಸ್ಟಿಕ್ ವಸ್ತುಗಳ ಬಳಕೆ, ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಎಲ್ಲಾ ವಾಣಿಜ್ಯ ಮಳಿಗೆಗಳಿಗೆ ದಾಳಿ ನಡೆಸಲು ತೀರ್ಮಾನಿಸಿದ್ದು, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದಲ್ಲಿ ಕಟ್ಟು ನಿಟ್ಟಾಗಿ ದಂಡವನ್ನು ವಿಧಿಸಿ, ಕಾನೂನು ಕ್ರಮ ಜರುಗಿಸಲಾಗುವುದು.

ಆದುದರಿಂದ ಸಾರ್ವಜನಿಕರು /ಉದ್ದಿಮೆದಾರರು ಮೇಲಿನ ಸೂಚನೆಗಳನ್ನು ಪಾಲಿಸಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭಾ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News