'ಮಂಜುನಾಥ ಉದ್ಯಾವರರ ಸಾಮಾಜಿಕ ಬದ್ಧತೆಯಲ್ಲಿ ಕೃತಕತೆ ಇರಲಿಲ್ಲ'

Update: 2019-08-30 16:46 GMT

ಉದ್ಯಾವರ, ಆ.30: ದಿ.ಮಂಜುನಾಥ ಉದ್ಯಾವರ್ ಅವರ ಸಾಮಾಜಿಕ ಬದ್ದತೆ ಅವರ ಕುಟುಂಬದ ಬಳುವಳಿ. ಹೀಗಾಗಿ ಅದರಲ್ಲಿ ಗಟ್ಟಿತನವಿತ್ತು. ಕೃತಕತೆ ಇರಲಿಲ್ಲ. ಸಾಮಾಜಿಕ ಬದುಕಿನಲ್ಲಿ ಪ್ರಾಮಾಣಿಕತೆ ಹೊಂದಿದ್ದ ಮಂಜು ಅವರನ್ನು ಸಾವಿನ ನಂತರವೂ ನೆನಪಿಸಿಕೊಳ್ಳಲಾಗುತ್ತಿದೆ ಎಂದು ಉಡುಪಿ ಧರ್ಮಗುರುಗಳೂ, ಮಂಜುನಾಥ ಉದ್ಯಾವರ್‌ರ ನಿಕಟವರ್ತಿ ಆಗಿದ್ದ ವಂ. ವಿಲಿಯಂ ಮಾರ್ಟಿಸ್ ಹೇಳಿದ್ದಾರೆ.

ಸ್ಥಳೀಯ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನಡೆದ ಏಳನೇ ವರ್ಷದ ಮಂಜುನಾಥ ಉದ್ಯಾವರ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಪಂನ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಮಂಜಣ್ಣ ಸಮಾಜ ಕಟ್ಟುವ ಕೆಲಸ ಮಾಡಿದವರು. ಅವರ ಸ್ವಾರ್ಥ ರಹಿತ ಬದುಕು ಇಂದಿನ ಯುವಕರಿಗೊಂದು ಮಾದರಿ.ರಾಜಕೀಯ ವ್ಯಕ್ತಿಗಳನ್ನು ಗುಮಾನಿಯಲ್ಲಿ ನೋಡುವ ಈ ಕಾಲಘಟ್ಟ ದಲ್ಲಿ ಮಂಜುನಾಥ ಉದ್ಯಾವರ್ ವ್ಯಕ್ತಿತ್ವ ನಮಗೆ ಬೇಕಾಗಿದೆ ಎಂದರು.

ಕುಂದಾಪುರದ ಖ್ಯಾತ ನ್ಯಾಯವಾದಿ ಶ್ಯಾಮಲಾ ಭಂಡಾರಿ ಮಾತನಾಡಿ, ಉದ್ಯಾವರ ಗ್ರಾಮವನ್ನು ಒಂದು ಮಾದರಿ ಗ್ರಾಮವನ್ನಾಗಿಸಬೇಕು ಎಂಬ ಉತ್ಕಟವಾದ ಹಂಬಲ ಮಂಜು ಅವರಿಗೆ ಇತ್ತು. ಅದರಂತೆ ಅವರು ನಡೆದು ಕೊಂಡರೂ ಕೂಡಾ. ಅವರ ಸಾಮಾಜಿಕ ಬದ್ದತೆ ಸ್ವಾರ್ಥ ರಹಿತ ಬದುಕು, ಪ್ರಾಮಾಣಿಕತೆ, ಸೇವಾ ಮನೋಭಾವ, ನಿಷ್ಟುರತೆ ಮೊದಲಾದ ಗುಣಗಳು ಅವರನ್ನು ಇಂದೂ ಬದುಕಿಸಿದೆ ಎಂದರು.

ವೇದಿಕೆಯಲ್ಲಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ತಿಲಕ್‌ರಾಜ್ ಸಾಲ್ಯಾನ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು. ಮಾಜಿ ಅಧ್ಯಕ್ಷ ಅನೂಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಜುಳಾ ಸುಬ್ರಹ್ಮಣ್ಯ ಅಭಿನಯಿಸಿರುವ ರಾಧ (ನಿರ್ದೇಶನ: ಶ್ರೀಪಾದ್ ಭಟ್, ರಚನೆ: ಸುಧಾ ಆಡುಕಳ) ಏಕವ್ಯಕ್ತಿ ರಂಗ ಪ್ರದರ್ಶನ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News