ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಸನ್ಮಾನ
ಪುತ್ತೂರು: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇದನ್ನು ಅರ್ಥ ಮಾಡಿಕೊಂಡ ಪಕ್ಷದ ಕಾರ್ಯಕರ್ತರು ವಿರೋಧ ಪಕ್ಷದ ಮನೋಸ್ಥಿತಿಯಿಂದ ಹೊರಬಂದು ಆಡಳಿತ ಪಕ್ಷದ ಕಾರ್ಯಕರ್ತರಂತೆ ವರ್ತಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಶುಕ್ರವಾರ ತನ್ನ ಹುಟ್ಟೂರಾದ ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ವಿರೋಧ ಪಕ್ಷದಲ್ಲಿ ಇರುವಂತೆ ಮಾತನಾಡಬೇಡಿ, ವರ್ತಿಸಬೇಡಿ, ವ್ಯವಹರಿಸಬೇಡಿ. ಆಡಳಿತ ಪಕ್ಷದಲ್ಲಿ ಇರುವ ಕಾರಣ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ವರ್ತಿಸಿ ಎಂದು ಹೇಳಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ 104ರ ಬದಲು 120 ಸೀಟ್ ನಮಗೆ ಸಿಕ್ಕಿದ್ದರೆ ಬಿ.ಎಸ್. ಯಡಿಯೂರಪ್ಪ ಒಂದು ವರ್ಷದ ಮೊದಲೇ ಮುಖ್ಯಮಂತ್ರಿಯಾಗುತ್ತಿದ್ದರು. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಪಕ್ಷಕ್ಕೆ ಬರುವ ನಿಟ್ಟಿನಲ್ಲಿ ನಾವೆಲ್ಲ ಯತ್ನಿಸ ಬೇಕಾಗಿದೆ. ಈ ಬಗ್ಗೆ ನನ್ನೂರಿನ ಕಾರ್ಯಕರ್ತರಾದ ನಿಮ್ಮೆಲ್ಲರಲ್ಲಿ ನನ್ನಷ್ಟೇ ಹೊಣೆಗಾರಿಕೆಯಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆ ದೊಡ್ಡ ವಿಶ್ವ ವಿದ್ಯಾಲಯವಿದ್ದಂತೆ. ಯಾವುದೇ ಡಿಗ್ರಿ, ಪಿಎಚ್‍ಡಿ ಪಡೆಯದ ನನಗೆ ಅತಿ ಹೆಚ್ಚಿನ ಜ್ಞಾನವನ್ನು ಸಂಘ ಶಿಕ್ಷಣ ನೀಡಿದೆ. ಸಾಮಾನ್ಯ ಶಾಖೆಯಲ್ಲಿ ಬೆಳೆದ ಕಾರ್ಯಕರ್ತ ಪ್ರಧಾನಿಯಾಗಿ ಜವಾಬ್ದಾರಿ ಪಡೆದುಕೊಂಡಂತೆ ನನಗೂ ಮಹತ್ವದ ಜವಾಬ್ದಾರಿಯನ್ನು ಸಂಘ ನೀಡಿದೆ. ನನ್ನ ಮೇಲೆ ಎಲ್ಲರೂ ಇಟ್ಟಿರುವ ಗೌರವ, ಪ್ರೀತಿ, ನಂಬಿಕೆ ಮತ್ತು ಕೊಟ್ಟಿರುವ ಆಶೀರ್ವಾದಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪುತ್ತೂರಿನವರಾದ ಡಿ.ವಿ. ಸದಾನಂದ ಗೌಡರು ಸಂಸದರಾಗಿ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾದರು. ಇಲ್ಲಿನವರೇ ಆದ ಶೋಭಾ ಕರಂದ್ಲಾಜೆ, ವಿನಯ ಕುಮಾರ್ ಸೊರಕೆ ರಾಜ್ಯಮಟ್ಟದಲ್ಲಿ ಮಿಂಚಿದರು. ನಾನು ಕೂಡ ಮೂರು ಬಾರಿ ಸಂಸದನಾದೆ, ರಾಜ್ಯಾಧ್ಯಕ್ಷನಾದೆ. ಸಂಜೀವ ಮಠಂದೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದರು. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲೂ ಪುತ್ತೂರಿನ ನಾಯಕರು ಮಹತ್ವದ ಹೊಣೆ ನಿಭಾಯಿಸಿದರು. ಪುತ್ತೂರಿನ ರಾಜಕೀಯ ನೆಲ ಸಮೃದ್ಧವಾಗಿದೆ. ಇದರ ಬಗ್ಗೆ ಯಾರಾದರೂ ಪಿಎಚ್‍ಡಿ ಕೂಡ ಮಾಡಬಹುದು ಎಂದು ಹೇಳಿದರು.
ನಾನು ಕೇರಳದ ಕೊಚ್ಚಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ರಾಜ್ಯದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸುವಂತೆ ಕರೆಬಂತು. ಬಿಜೆಪಿ ಪಕ್ಷ ವಿಭಿನ್ನತೆಯನ್ನು ಹೊಂದಿದೆ ಎನ್ನುವುದಕ್ಕೆ ಪೂರಕವಾಗಿ ಮತ್ತು ಸಾಮಾನ್ಯ ಕಾರ್ಯಕರ್ತನಿಗೂ ಅತಿ ಶ್ರೇಷ್ಠ ಜವಾಬ್ದಾರಿ ನೀಡುವ ವ್ಯವಸ್ಥೆ ನಮ್ಮ ಪಕ್ಷದಲ್ಲಿ ಮಾತ್ರ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯದಲ್ಲಿ ಪಕ್ಷದ ಹಿರಿಯರ ದಂಡೇ ಇದೆ. ಕೋಟಿ ಕೋಟಿ ಕಾರ್ಯಕರ್ತ ರಿದ್ದಾರೆ. ಎಲ್ಲರ ಸಹಕಾರದಿಂದ ಜವಾಬ್ದಾರಿಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್, ಮಾಜಿ ಶಾಶಕಿ ಮಲ್ಲಿಕಾ ಪ್ರಸಾದ್, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಗೋಪಾಲಕೃಷ್ಣ ಹೇರಳೆ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಂದಿಸಿದರು. ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.