ಇತಿಹಾಸ ಸೇರಲಿರುವ ಕಾರ್ಪೊರೇಶನ್ ಬ್ಯಾಂಕ್
ಮಂಗಳೂರು, ಆ.30: ಯೂನಿಯನ್ ಬ್ಯಾಂಕ್ ಜೊತೆ ವಿಲೀನಗೊಳ್ಳುವುದರೊಂದಿಗೆ ಕರ್ನಾಟಕ ಕರಾವಳಿಯ ಪ್ರತಿಷ್ಠಿತ ಬ್ಯಾಂಕ್ ಎನಿಸಿದ್ದ ಕಾರ್ಪೊರೇಶನ್ ಬ್ಯಾಂಕ್ ಇತಿಹಾಸದ ಮರೆಗೆ ಸರಿಯಲಿದೆ.
12 ಮಾರ್ಚ್ 1906ರಲ್ಲಿ ಹಾಜಿ ಅಬ್ದುಲ್ಲಾ ಸಾಹೇಬ್ ಅವರು ಉಡುಪಿಯಲ್ಲಿ ಸ್ಥಾಪಿಸಿದ ಕಾರ್ಪೊರೇಶನ್ ಬ್ಯಾಂಕ್‌ನ ಆಗಿನ ಹೆಸರು ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಎಂದಾಗಿತ್ತು. ದೇಶದ ಬ್ಯಾಂಕಿಂಗ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿತ್ತು. ಮಹಾತ್ಮಾ ಗಾಂಧೀಜಿಯವರ ಆದರ್ಶಗಳಿಂದ ಪ್ರೇರಿತರಾದ ಹಾಜಿ ಅಬ್ದುಲ್ಲಾ ಅವರು ಸ್ಥಾಪಿಸಿದ ಈ ಬ್ಯಾಂಕ್ ಕರ್ನಾಟಕ ಕರಾವಳಿಯಲ್ಲಿ ಬ್ಯಾಂಕಿಂಗ್ ಉದ್ಯಮಕ್ಕೆ ತಳಹದಿಯನ್ನು ಹಾಕಿಕೊಟ್ಟಿತ್ತು.
ಜನಸಾಮಾನ್ಯರಿಗೆ ಸಾಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಜಿ ಅಬ್ದುಲ್ಲಾ ಅವರ ಸಾಧನೆ ಅನನ್ಯವಾದುದಾಗಿತ್ತು. 1972ರಲ್ಲಿ ಈ ಬ್ಯಾಂಕ್‌ಗೆ ಕಾರ್ಪೊರೇಶನ್ ಬ್ಯಾಂಕ್ ಎಂದು ಮರುನಾಮಕರಣ ಮಾಡಲಾಯಿತು. ಕೇವಲ 5 ಸಾವಿರ ಬಂಡವಾಳದೊಂದಿಗೆ 113 ವರ್ಷಗಳ ಹಿಂದೆ ಸ್ಥಾಪಿಸಿದ್ದ ಈ ಬ್ಯಾಂಕ್ ಈಗ ಹೆಮ್ಮರವಾಗಿ ಬೆಳೆದಿದೆ. 1980ರಲ್ಲಿ ಕಾರ್ಪೊರೇಶನ್ ಬ್ಯಾಂಕ್ ರಾಷ್ಟ್ರೀಕರಣಗೊಂಡಿತು. ಇಂದು ಕಾರ್ಪೊರೇಶನ್ ಬ್ಯಾಂಕ್ 2,600 ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ.