ಟೆಸ್ಟ್: ಕೊಹ್ಲಿ ಸಾಹಸದಲ್ಲಿ ಭಾರತ ಸುಭದ್ರ
ಕಿಂಗ್‌ಸ್ಟನ್ ಜಮೈಕಾ, ಆ.31: ನಾಯಕ ವಿರಾಟ್ ಕೊಹ್ಲಿಯವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸುಭದ್ರ ಸ್ಥಿತಿ ತಲುಪಿದೆ. 5 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದ ಭಾರತ, ಅತಿಥೇಯರ ಮೇಲುಗೈಗೆ ಅವಕಾಶ ನೀಡಲಿಲ್ಲ.
ಭಾರತಕ್ಕೆ ಅತಿಹೆಚ್ಚು ಗೆಲುವು ತಂದುಕೊಟ್ಟ ನಾಯಕ ಎಂಬ ಮಹೇಂದ್ರ ಸಿಂಗ್ ಧೋನಿಯವರ ದಾಖಲೆ ಮುರಿಯುವ ಮೂಲಕ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವ ಹುಮ್ಮಸ್ಸಿನಲ್ಲಿರುವ ಕೊಹ್ಲಿ (76) ಜಾಗರೂಕವಾಗಿ ಭಾರತದ ಇನಿಂಗ್ಸ್ ಕಟ್ಟಿದರು.
ದಿನದ ಕೊನೆಯ ಅವಧಿಯಲ್ಲಿ ಎದುರಾಳಿ ನಾಯಕನ ಬೌಲಿಂಗ್‌ನಲ್ಲಿ ಕೊಹ್ಲಿ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸುವ ಮುನ್ನ 163 ಎಸೆತಗಳಲ್ಲಿ 10 ಬೌಂಡರಿ ಸಹಿತ 76 ರನ್ ಗಳಿಸಿ ಭಾರತವನ್ನು ಅಪಾಯದಿಂದ ಪಾರುಮಾಡಿದರು. ಮುರಿಯದ ಆರನೇ ವಿಕೆಟ್‌ಗೆ 62 ರನ್ ಸೇರಿಸಿರುವ ಹನುಮ ವಿಹಾರಿ (42 ನಾಟೌಟ್) ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ (27 ನಾಟೌಟ್) ಭಾರತದ ಇನಿಂಗ್ಸ್ ಬೆಳೆಯುವ ಸೂಚನೆ ನೀಡಿದ್ದಾರೆ. ಎರಡು ಟೆಸ್ಟ್‌ಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್, 318 ರನ್‌ಗಳ ಹೀನಾಯ ಸೋಲು ಕಂಡಿತ್ತು. ವೆಸ್ಟ್‌ಇಂಡೀಸ್ ಪರ ನಾಯಕ ಹೋಲ್ಡರ್ 20 ಓವರ್‌ಗಳಲ್ಲಿ 39 ರನ್‌ಗಳಿಗೆ 3 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು.
ಹಚ್ಚ ಹಸಿರಿನ ಕ್ರೀಡಾಂಗಣದಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ (13) ಹೋಲ್ಡರ್ ಅವರ ಮೊದಲ ಓವರ್‌ನಲ್ಲೇ ರಖೀಮ್ ಕಾರ್ನ್‌ವೆಲ್ ಅವರಿಗೆ ಸ್ಲಿಪ್‌ನಲ್ಲಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಚೇತೇಶ್ವರ ಪುಜಾರ (6) ಕೂಡಾ ಅಗ್ಗಕ್ಕೆ ನಿರ್ಗಮಿಸಿದಾಗ ಭಾರತ ಸಂಕಷ್ಟಕ್ಕೆ ಸಿಲುಕಿತು. ಟೆಸ್ಟ್ ಜೀವನದ ಮೂರನೇ ಅರ್ಧಶತಕ (55) ಗಳಿಸಿದ ಮಾಯಾಂಕ್ ಅಗರ್‌ವಾಲ್, ನಾಯಕ ಕೊಹ್ಲಿ ಜತೆ ಸೇರಿ ಇನಿಂಗ್ಸ್ ಆಧರಿಸಿದರು.