ಎಸ್‌ಜೆಇಸಿಯಲ್ಲಿ ಕ್ರೈಸ್ತ ಧರ್ಮಗುರುಗಳು- ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯ ಕುರಿತು ಕಾರ್ಯಾಗಾರ

Update: 2019-08-31 05:23 GMT

ಮಂಗಳೂರು, ಆ.31: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ವ್ಯವಹಾರ ಆಡಳಿತ ವಿಭಾಗವು ಆ.29 ಮತ್ತು 30ರಂದು ಕ್ರೈಸ್ತ ಧರ್ಮಗುರುಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸುವ ಕುರಿತು ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮವನ್ನು (ಎಂಡಿಪಿ) ಆಯೋಜಿಸಿತ್ತು.

ಕಾರ್ಯಾಗಾರವನ್ನು ಆ.29ರಂದು ಸುಪ್ರೀಂ ಕೋರ್ಟ್ ಮತ್ತು ದಿಲ್ಲಿ ಹೈಕೋರ್ಟ್‌ನ ವಕೀಲ ವಂ.ರವಿ ಸಾಗರ್ ಎಸ್.ಜೆ. ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಸಂಸ್ಥೆಗಳನ್ನು ನಿರ್ವಹಿಸುವಲ್ಲಿ ಕಾನೂನು ತೊಡಕುಗಳು ಇರುವುದರಿಂದ ಧರ್ಮಗುರುಗಳು ಮತ್ತು ಧಾರ್ಮಿಕರಿಗೆ ತರಬೇತಿ ನೀಡುವುದು ಅಗತ್ಯ ಎಂದು ಅಭಿಪ್ರಾಯಿಸಿದರು.

ಸಂಸ್ಥೆಯ ಆಡಳಿತಾಧಿಕಾರಿಗಳು ಬದಲಾಗುತ್ತಲೇ ಇದ್ದರೂ, ಅವು ಕಾನೂನು ಚೌಕಟ್ಟಿನ ಕಕ್ಷೆಯೊಳಗೆ ಕಾರ್ಯನಿರ್ವಹಿಸಬೇಕು, ಅದು ವಿಫಲವಾದರೆ ಸಂಸ್ಥೆಯ ಕಾರ್ಯನಿರ್ವಹಣೆ ಜಟಿಲವಾಗುತ್ತದೆ ಎಂದವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ.ಪೀಟರ್ ಪಾವ್ಲ್ ಸಲ್ದಾನ, ಸಮಾಜದಲ್ಲಿ ಉದ್ಭವಿಸುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಸಾಮರಸ್ಯದಿಂದ ಪರಿಹರಿಸಬೇಕು ಎಂದು ಕರೆಯಿತ್ತರು.

ಇಂದಿನ ದಿನಗಳಲ್ಲಿ ಸಂಸ್ಥೆಯನ್ನು ನಿರ್ವಹಿಸಲು ಅದರ ರಚನೆ, ಅದರ ಮೇಲೆ ಪರಿಣಾಮ ಬೀರುವ ಕಾನೂನು ಮತ್ತು ಅದು ಹೊಂದಿರುವ ಸ್ವತ್ತುಗಳ ನಿರ್ವಹಣೆಯ ಬಗ್ಗೆ ಆಳವಾದ ತಿಳುವಳಿಕೆ ಅಗತ್ಯವಿದೆ ಎಂದು ಅವರು ಹೇಳಿದರು. ಕಾಲೇಜಿನ ನಿರ್ದೇಶಕ ವಂ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಮಾತನಾಡಿ ಶುಭ ಹಾರೈಸಿದರು.

ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ ಮೊ. ಮ್ಯಾಕ್ಸಿಮ್ ಎಲ್. ನೊರೊನ್ಹಾ, ಕಾಲೇಜಿನ ಸಹಾಯಕ ನಿರ್ದೇಶಕರಾದ ವಂ.ರೋಹಿತ್ ಡಿಕೋಸ್ಟಾ ಮತ್ತು ವಂ. ಆಲ್ವಿನ್ ರಿಚರ್ಡ್ ಡಿಸೋಜ, ಎಂಡಿಪಿ ಆಯೋಜಕಿ ಡಾ. ಶಕೀಲಾ ಬಿ., ಕಾಲೇಜಿನ ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ, ಈ ಸಂದರ್ಭ ಉಪಸ್ಥಿತರಿದ್ದರು.

ಡಾ. ಬಬಿತಾ ರೋಹಿತ್ ಕಾರ್ಯಕ್ರಮ ಸಂಯೋಜಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ ರಿಯೊ ಡಿಸೋಜ ಸ್ವಾಗತಿಸಿದರು. ಎಂಬಿಎ ಡೀನ್ ಡಾ.ಪ್ರಕಾಶ್ ಪಿಂಟೊ ವಂದಿಸಿದರು.

ಎಂಡಿಪಿಯಲ್ಲಿ 130ಕ್ಕೂ ಹೆಚ್ಚು ಕ್ರೈಸ್ತ ಧರ್ಮಗುರುಗಳು ಮತ್ತು ಧಾರ್ಮಿಕರು ಭಾಗವಹಿಸಿದ್ದರು. ಸುಪ್ರೀಂ ಕೋರ್ಟ್ ಮತ್ತು ದಿಲ್ಲಿ ಹೈಕೋರ್ಟ್‌ನ ವಕೀಲ ವಂ.ರವಿ ಸಾಗರ್ ಎಸ್.ಜೆ. ಮೊದಲ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಪುಣೆಯ ಜ್ಞಾನದೀಪ ವಿದ್ಯಾಪೀಠದಲ್ಲಿ ಗ್ರಾಮೀಣ ನಿರ್ವಹಣಾ ಕಾರ್ಯಕ್ರಮದ ನಿರ್ದೇಶಕ ಮತ್ತು ಸಂಯೋಜಕ ವಂ. ಕೊನ್ರಾಡ್ ನೊರೊನ್ಹಾ ಎಸ್‌ಜೆ ಮತ್ತು ಪ್ರಖ್ಯಾತ ಹಣಕಾಸು ಹಾಗೂ ಕಾನೂನು ಸಲಹೆಗಾರ ಪ್ರೊ.ಲೈನಲ್ ಅರಾನ್ಹಾ ಎರಡನೇ ದಿನದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News