ಡಿಕೆಶಿ ವಿರುದ್ಧ ರಾಜಕೀಯ ದ್ವೇಷ ಸಾಧನೆ: ಸಿದ್ದರಾಮಯ್ಯ
ಮಂಗಳೂರು, ಆ.31: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದ.ಕ. ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಉದ್ದೇಶದಿಂದ ಇಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.
ರಾಜಕೀಯ ದುರುದ್ದೇಶದಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಈ.ಡಿ.)ವನ್ನು ದುರುಪಯೋಗ ಮಾಡಲಾಗುತ್ತಿದೆ. ಅವರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಆದರೆ ರಾಜಕೀಯ ದ್ವೇಷದಿಂದ ಈ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಇದರ ವಿರುದ್ಧ ಕಾನೂನು ಮೂಲಕವೇ ಹೋರಾಟ ಮಾಡಲಾಗುವುದು ಎಂದರು.
ಆರ್‌ಬಿಐ ಸಹಿತ ಬ್ಯಾಂಕ್‌ಗಳಲ್ಲಿ ಕೇಂದ್ರ ಸರಕಾರದ ಅತಿಯಾದ ಹಸ್ತಕ್ಷೇಪ
27 ಬ್ಯಾಂಕುಗಳನ್ನು ವಿಲೀನ ಮಾಡಿ ಅವುಗಳನ್ನು ಬಲಪಡಿಸುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ವಿಲೀನದಿಂದ ಬ್ಯಾಂಕುಗಳು ಬಲಗೊಳ್ಳುತ್ತವೆ ಎಂದು ನನಗೆ ಅನ್ನಿಸುತ್ತಿಲ್ಲ. ಸದ್ಯ ರಿಸರ್ವ್ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳ ಮೇಲೆ ಕೇಂದ್ರದ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂದು ಅವರು ದೂರಿದರು.
ದೇಶದಲ್ಲಿ ಆರ್ಥಿಕ ವ್ಯವಸ್ಥೆ ದುರ್ಬಲವಾಗಿದೆ. ಜಿಡಿಪಿ ಬೆಳವಣಿಗೆ ದರ ಶೇ.5ರಷ್ಟು ಏರಿಕೆ ಕಂಡಿಂದೆ ಎನ್ನುತ್ತಾರೆ. ಕಳೆದ 6 ವರ್ಷಗಳಲ್ಲಿ ಇದೇ ಅತ್ಯಂತ ಕಡಿಮೆ ಅಂತಾನು ಅವರೇ ಹೇಳಿದ್ದಾರೆ. ಆದರೆ ನನ್ನ ಪ್ರಕಾರ ಇದು 5ಶೇ. ಇಲ್ಲ. ಇಲ್ಲವೇ 3.7 ಅಥವಾ 4 ಶೇ. ಆಗಿರಬೇಕು ಅಷ್ಟೇ ಎಂದು ಅಭಿಪ್ರಾಯಿಸಿದರು.
ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ 8-9 ಶೇ. ಜಿಡಿಪಿ ಇತ್ತು. ಸದ್ಯ ಜಿಡಿಪಿ ಕುಸಿತಕ್ಕೆ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಯೇ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಅವರು ಮೊದಲು ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಬಳಿ ತ್ಯಾಜ್ಯ ನೆರೆಯಿಂದ ಹುದುಗಿರುವ ಮಂದಾರ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ನೀಡಲಿದ್ದಾರೆ. ಬಳಿಕ ಬೆಳ್ತಂಗಡಿ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿಯಾಗಲಿದ್ದಾರೆ. ಆಮೇಲೆ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. 4 ಗಂಟೆಗೆ ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ