ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಾದಕ ದ್ರವ್ಯಗಳು ಮತ್ತು ರ್ಯಾಂಗಿಗ್ ಕುರಿತ ಜಾಗೃತಿ ಕಾರ್ಯಕ್ರಮ
ಕುಂದಾಪುರ, ಆ.31: ಮಾದಕ ದ್ರವ್ಯ ವ್ಯಸನಿ ಕೇವಲ ಏಕಾಂಗಿ ವ್ಯಸನಿಯಾಗಿರದೆ ತನ್ನ ಸ್ನೇಹಿತನಿಗೂ ಹಾಗೂ ಸಮಾನ ವಯಸ್ಕ ಗುಂಪಿಗೂ ಈ ದುರ್ವ್ಯಸನಕ್ಕೆ ಪ್ರೇರಣೆಯಾಗುತ್ತದೆ. ತತ್ಪರಿಣಾಮದಿಂದ ವ್ಯಸನಿಗಳ ಸಂಖ್ಯೆ ಇಮ್ಮಡಿ ಯಾಗುತ್ತದೆ. ದೈಹಿಕ ಮಾನಸಿಕ ಹತೋಟಿಯನ್ನು ಕಳೆದುಕೊಂಡ ವ್ಯಕ್ತಿಗಳಿಂದ ಸಮಾಜವು ಮಾರಕ ಪ್ರಭಾವವನ್ನು ಎದುರಿಸಬೇಕಾಗುತ್ತದೆ. ಎಂದು ಉಪನ್ಯಾಸಕ ಸುರೇಂದ್ರ ಶೆಟ್ಟಿ ಹೇಳಿದರು.
ಅವರು ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಮಾದಕದ್ರವ್ಯಗಳು ಮತ್ತು ರ್ಯಾಗಿಂಗ್’ ಕುರಿತ ವಿಶೇಷ ಉಪನ್ಯಾಸ ನೀಡಿದರು.
ಕೆಲವೊಂದು ಸನ್ನಿವೇಶದಲ್ಲಿ ಚಿಂತೆ, ಆಘಾತ, ಉದ್ವೇಗಕ್ಕೆ ಮನಸ್ಸು ಒಳಗಾಗುವುದು ಸಹಜ. ಹಾಗಂತ ಅದಕ್ಕೆ ಮಾದಕ ದ್ರವ್ಯಗಳು ಔಷಧವಲ್ಲ. ಮಾನಸಿಕ ಸ್ಥೈರ್ಯದಿಂದ ಸಂದಿಗ್ಧ ಪರಿಸ್ಥಿತಿಯ್ನನು ಎದುರಿಬೇಕು. ಸತ್ ಚಿಂತನೆಯಿಂದ ಜೀವನ ಪಾವನವಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಕೆ.ಸಿದ್ಧಪ್ಪ ಮಾತನಾಡಿ, ಮೊದಲು ನಾವು ಜ್ಞಾನವಂತರು, ಹೃದಯವಂತರಾಗಬೇಕು. ಇದರಿಂದ ಸರಿ ತಪ್ಪುಗಳ ಅರಿವು ಉಂಟಾಗುತ್ತದೆ. ಆ ಮೂಲಕ ನಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಸಾಧ್ಯ ಎಂದರು.
ಪ್ರಶಿಕ್ಷಣಾರ್ಥಿಗಳಾದ ಸಚಿನ್ ಸ್ವಾಗತಿಸಿದರು. ಮಮತಾ ಎಸ್. ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ವಂದಿಸಿದರು.