×
Ad

5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಗುಡ್ ಬೈ ಹೇಳಲು ಸಿದ್ಧರಾಗಿ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

Update: 2019-08-31 13:34 IST

ಹೊಸದಿಲ್ಲಿ, ಆ.31: ಭಾರತ ಶೀಘ್ರವಾಗಿ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಹಾಗೂ ನೂತನ ಆರ್ಥಿಕ ನೀತಿಯನ್ನು ಜಾರಿಗೊಳಿಸದಿದ್ದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದುವ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. “ನೂತನ ಆರ್ಥಿಕ ನೀತಿ ಜಾರಿಯಾಗದಿದ್ದರೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಗುಡ್‌ಬೈ ಹೇಳಲು ಸಿದ್ಧರಾಗಿ. ದಿಟ್ಟತನ ಅಥವಾ ಜ್ಞಾನ ಇವೆರಡೂ ಜತೆಗಿದ್ದರೆ ಮಾತ್ರ ಅರ್ಥವ್ಯವಸ್ಥೆ ಪಾತಾಳಕ್ಕೆ ಕುಸಿಯುವುದನ್ನು ತಪ್ಪಿಸಬಹುದು. ಈಗಿನ ಸಂದರ್ಭದಲ್ಲಿ ನಮ್ಮ ಬಳಿ ಇವೆರಡೂ ಇಲ್ಲ” ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

2019-20ರ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ದೇಶದ ಜಿಡಿಪಿ ಶೇ.5ಕ್ಕೆ ಕುಸಿದಿದೆ. ಆಟೊಮೊಬೈಲ್, ರಿಯಲ್ ಎಸ್ಟೇಟ್, ಉತ್ಪಾದನಾ ಕ್ಷೇತ್ರದಂತಹ ಪ್ರಮುಖ ರಂಗಗಳಲ್ಲಿ ಪ್ರಗತಿ ಗಣನೀಯ ಮಟ್ಟದಲ್ಲಿ ಕುಸಿದಿದೆ. ಆರ್ಥಿಕ ಕುಸಿತವನ್ನು ತಡೆಯಲು ಬೃಹತ್ ಬ್ಯಾಂಕ್ ವಿಲೀನ ಮುಂತಾದ ಸರಣಿ ಕಾರ್ಯಕ್ರಮಗಳನ್ನು ಸರಕಾರ ಕೈಗೊಂಡರೂ ಹೆಚ್ಚಿನ ಪರಿಣಾಮ ಬೀರದು. ಹೂಡಿಕೆ ಹೆಚ್ಚಿಸುವತ್ತ ಸರಕಾರ ಗಮನ ಹರಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಈ ಮಧ್ಯೆ, ಶುಕ್ರವಾರ ಹೇಳಿಕೆ ನೀಡಿರುವ ಮುಖ್ಯ ಆರ್ಥಿಕ ಸಲಹೆಗಾರ ಕೆವಿ ಸುಬ್ರಮಣಿಯನ್ ಸರಕಾರ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಮತ್ತು ಬ್ಯಾಂಕ್‌ಗಳ ಮಹಾವಿಲೀನದಂತಹ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶವು ಅತೀ ಶೀಘ್ರದಲ್ಲೇ ಉನ್ನತ ಪ್ರಗತಿಯ ದಿಕ್ಕಿನಲ್ಲಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News