ಬೈಂದೂರು ಬಳಿ ವಾಹನ ಅಪಘಾತ: ಭಟ್ಕಳದ ಹೋಟೆಲ್ ಉದ್ಯಮಿ ಮೃತ್ಯು
ಕುಂದಾಪುರ, ಆ.31: ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಭಟ್ಕಳದ ಹೋಟೆಲ್ ಉದ್ಯಮಿಯೊಬ್ಬರು ಮೃತಪಟ್ಟ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಕನ್ಕಟ್ಟೆ ಎಂಬಲ್ಲಿ ಇಂದು ಪೂರ್ವಾಹ್ನ 11 ಗಂಟೆ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಮಹಿಳೆಯೊಬ್ಬರ ಸಹಿತ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಭಟ್ಕಳದ ಸಿಟಿಲೈಟ್ ಹೋಟೆಲ್ ಮಾಲಕ ನೂರುಲ್ ಅಮೀನ್(48) ಮೃತಪಟ್ಟವರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಅವರು ಅಲ್ಲಿಂದ ವಾಪಸ್ ಭಟ್ಕಳದತ್ತ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ನೂರುಲ್ ಅಮೀನ್ ಅವರ ಕಾರು ಹಾಗೂ ಇನ್ನೊಂದು ಕಾರು ಢಿಕ್ಕಿ ಮುಖಾಮುಖಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಗಂಭೀರ ಗಾಯಗೊಂಡಿದ್ದ ನೂರುಲ್ ಅಮೀನ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ನೂರುಲ್ ಅಮೀನ್ ಕಾರಿನಲ್ಲಿ ಒಬ್ಬರೇ ಇದ್ದರೆನ್ನಲಾಗಿದೆ. ಅಪಘಾತಕ್ಕೀಡಾದ ಇನ್ನೊಂದು ಕಾರಿನಲ್ಲಿದ್ದ ಮಹಿಳೆಯೊಬ್ಬರ ಸಹಿತ ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತಕ್ಕೆ ಸಿಲುಕಿದ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.