ಶಾಶ್ವತ ಪರಿಹಾರ ಕಲ್ಪಿಸಲು ಸರಕಾರಕ್ಕೆ ಆಗ್ರಹ: ಸಿದ್ದರಾಮಯ್ಯ

Update: 2019-08-31 10:59 GMT

ಮಂಗಳೂರು, ಆ.31: ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯ ಕುಸಿದು ಸಂತ್ರಸ್ತರಾಗಿರುವ ಮಂದಾರ ಪ್ರದೇಶದ 27 ಕುಟುಂಬಗಳಿಗೆ ಶಾಶ್ವತ ಪರಿಹಾರಕ್ಕೆ ಸರಕಾರವನ್ನು ಆಗ್ರಹಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ.

ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಅಲ್ಲಿಂದ ನೇರವಾಗಿ ಮಂದಾರ ಪ್ರದೇಶಕ್ಕೆ ಭೇಟಿದ ಸಂದರ್ಭ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ವಿವರಿಸಿ, ಶಾಶ್ವತ ಪರಿಹಾರದ ಬೇಡಿಕೆಯನ್ನು ಪ್ರಸ್ತಾಪಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಪ್ರವಾಹದ ರೀತಿಯಲ್ಲಿ ಡಂಪಿಂಗ್ ಯಾರ್ಡ್‌ನಿಂದ ಮಂದಾರಕ್ಕೆ ವ್ಯಾಪಿಸಿರುವ ತ್ಯಾಜ್ಯ ರಾಶಿಯನ್ನು ವೀಕ್ಷಿಸಿದರು. ಬಳಿಕ ಮತ್ತೆ ಸಂತ್ರಸ್ತರ ಜತೆ ಮಾತನಾಡಿದರು.

ಸಂತ್ರಸ್ತರಿಗೆ ಮನೆ ನಿರ್ಮಿಸುವವರೆಗೆ ಜೀವನೋಪಾಯಕ್ಕಾಗಿ ನಿರ್ದಿಷ್ಟ ಮೊತ್ತವನ್ನು ನೀಡಬೇಕು ಅಥವಾ ಬಾಡಿಗೆ ಮನೆಯಲ್ಲಿ ತಿಂಗಳಿಗೆ 10,000 ರೂ.ನಂತೆ ಒದಗಿಸಲು ಒತ್ತಾಯಿಸಲಾಗುವುದು. ಇದೇ ವೇಳೆ ಸರಕಾರವು ಮಂದಾರ ಪ್ರದೇಶವನ್ನು ವ್ಯಾಪಿಸಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಬದುಕಲು ಯೋಗ್ಯವಾಗಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಇಲ್ಲಿ ತಡೆಗೋಡೆ ನಿರ್ಮಿಸಿ ಆ ಜಾಗವನ್ನೂ ಸ್ವಾಧೀನಪಡಿಸಿಕೊಂಡು ಜಮೀನುದಾರರಿಗೆ ಪರಿಹಾರ ಮೊತ್ತ ನೀಡಬೇಕು. ಕಲುಷಿತ ನೀರು ಹರಿದು ಹೋಗದಂತೆ ತಡೆಯಲು, ಕೃಷಿ ಯೋಗ್ಯ ಜಮೀನನ್ನಾಗಿಸುವಲ್ಲಿ ಕ್ರಮ ವಹಿಸುವ ಬಗ್ಗೆ ಸರಕಾರಕ್ಕೆ ಸಲಹೆ ನೀಡಲಾಗುವುದು ಎಂದು ಅವರು ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಮಹಾನಗರ ಪಾಲಿಕೆಯವರು ಡಂಪಿಂಗ್ ಯಾರ್ಡ್ ಮಾಡಿ ಇಲ್ಲಿ ಕಸ ಹಾಕಿದ್ದಾರೆ. ಕಸ ಹಾಕಿದ ಸಂದರ್ಭ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಯಾವತ್ತಾದರೂ ಇಂತಹ ಪರಿಸ್ಥಿತಿ ಎದುರಾಗಬಹುದು ಎಂಬ ಬಗ್ಗೆ ಮುನ್ನೋಟವಿರಲಿಲ್ಲ. ಮೊದಲೇ ತಡೆಗೋಡೆಯನ್ನು ನಿರ್ಮಿಸಿದ್ದಲ್ಲಿ ಇಂತಹ ದುರಂತ ತಪ್ಪಿಸಬಹುದಿತ್ತು. 27 ಮನೆಗಳಿಗೆ ಹಾನಿಯಾಗಿವೆ. ಕೃಷಿ ಜಮೀನು, ತೋಟ, ದೈವಸ್ಥಾನಗಳು ಕಸದಿಂದ ಮುಚ್ಚಿವೆ. ಶಾಶ್ವತವಾದ ಪರಿಹಾರ ಅಗತ್ಯವಾಗಿದೆ. ತಾತ್ಕಾಲಿಕ ಪರಿಹಾರದಿಂದ ಯಾವುದೇ ಪ್ರಯೋಜನವಾಗದು. 10 ಮನೆಯವರು ಇಲ್ಲೇ ಇರಲು ಬಯಸಿದ್ದಾರೆ. ಉಳಿದ 17 ಮನೆಯವರು ಬೇರೆ ಕಡೆ ಸ್ಥಳಾಂತರಗೊಳ್ಳಲು ಬಯಸಿದ್ದಾರೆ. ಅವರಿಗೆ ಜಾಗ ನೀಡಿ ಮನೆ ಕಟ್ಟಿ ಕೊಡಬೇಕು. ಇಲ್ಲಿ ಸಂಗ್ರಹವಾಗಿರುವ ಕಸದಿಂದ ಇಲ್ಲಿನ ಜಲಮೂಲಗಳು ಕಲುಷಿತವಾಗಿವೆ. ಅದನ್ನು ತಪ್ಪಿಸುವ ಕೆಲಸ ಆಗಬೇಕು. ಕಸವನ್ನು ತೆರವುಗೊಳಿಸಬೇಕು. ಇಲ್ಲವೇ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ಡಂಪಿಂಗ್ ಯಾರ್ಡ್ ಮಾಡಬಹುದು. ಜತೆಗೆ ನಿರಾಶ್ರಿತರಿಗೆ ಒಂದು ನಿರ್ದಿಷ್ಟ ಮೊತ್ತವನ್ನು ನೀಡಿ ಅವರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು. ಕೃಷಿ ಹಾನಿಯನ್ನು ಸರಕಾರ ತಕ್ಷಣ ಪರಿಹಾರ ರೂಪದಲ್ಲಿ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕರಾದ ಯು.ಟಿ.ಖಾದರ್, ಐವನ್ ಡಿಸೋಜ, ಮಾಜಿ ಮೇಯರ್‌ಗಳಾದ ಭಾಸ್ಕರ ಮೊಯ್ಲಿ, ಕವಿತಾ ಸನಿಲ್, ಶಶಿಧರ ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News