×
Ad

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವಿಶಿಷ್ಟ ದಾಖಲೆ ನಿರ್ಮಿಸಿದ ರಹಕೀಮ್ ಕಾರ್ನ್‌ವಾಲ್

Update: 2019-08-31 17:25 IST

ಕಿಂಗ್ಸ್‌ಸ್ಟನ್(ಜಮೈಕಾ), ಆ.31: ಆಲ್‌ರೌಂಡರ್ ರಹಕೀಮ್ ಕಾರ್ನ್‌ವಾಲ್ ಭಾರತ ವಿರುದ್ಧ ಶುಕ್ರವಾರ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು. ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ತೂಕದ ಕ್ರಿಕೆಟಿಗ ಎನಿಸಿಕೊಳ್ಳುವುದರೊಂದಿಗೆ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದರು.

ಆರಡಿ ಎತ್ತರದ ಕಾರ್ನ್‌ವಾಲ್ ಸುಮಾರು 140 ಕೆಜಿ ಭಾರವಿದ್ದಾರೆ. 133ರಿಂದ 139 ಕೆಜಿ ತೂಕವಿದ್ದ ಆಸ್ಟ್ರೇಲಿಯದ ಮಾಜಿ ನಾಯಕ ವಾವ್ರಿಕ್ ಆರ್ಮ್‌ಸ್ಟ್ರಾಂಗ್ ದಾಖಲೆಯನ್ನು ಕಾರ್ನ್‌ವಾಲ್ ಮುರಿದರು. ದೈತ್ಯ ಕ್ರಿಕೆಟಿಗ ಆರ್ಮ್‌ಸ್ಟ್ರಾಂಗ್ 1902 ಹಾಗೂ 1921ರ ಮಧ್ಯೆ 50 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, ಆಸ್ಟ್ರೇಲಿಯವನ್ನು 10 ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದ್ದರು.

 26ರ ವಯಸ್ಸಿನ ಕಾರ್ನ್‌ವಾಲ್ 55 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 260 ವಿಕೆಟ್‌ಗಳು ಹಾಗೂ 2,224 ರನ್ ಗಳಿಸಿದ ಬಳಿಕ ವಿಂಡೀಸ್ ಪರ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಪಡೆದಿದ್ದಾರೆ.

ತನ್ನ ಚೊಚ್ಚಲ ಪಂದ್ಯದಲ್ಲೇ ಪರಿಣಾಮಕಾರಿ ಪ್ರದರ್ಶನ ನೀಡಿರುವ ಕಾರ್ನ್‌ವಾಲ್ ಶುಕ್ರವಾರ ಸಬೀನಾ ಪಾರ್ಕ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ವಿಕೆಟನ್ನು ಪಡೆದಿದ್ದಾರೆ. ಮೊದಲ ದಿನದಾಟದಲ್ಲಿ 27 ಓವರ್ ಬೌಲಿಂಗ್ ಮಾಡಿದ್ದ ಕಾರ್ನ್‌ವಾಲ್ ಕೇವಲ 69 ರನ್ ನೀಡಿ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು. ನಾಯಕ ಜೇಸನ್ ಹೋಲ್ಡರ್ ಬೌಲಿಂಗ್‌ನಲ್ಲಿ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ನೀಡಿದ್ದ ಕ್ಯಾಚ್‌ನ್ನು ಕಾರ್ನ್‌ವಾಲ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News