ಮೆಡಿಕ್ವಿಜ್- ವೈದ್ಯಕೀಯ ರಸ ಪ್ರಶ್ನಾ ಸ್ಪರ್ಧಾಕೂಟ: ಸಿದ್ಧಾರ್ಥ ರಾವ್-ಸಚಿನ್ ಬೆಕಲ್ ತಂಡಕ್ಕೆ ಪ್ರಶಸ್ತಿ
ಮಂಗಳೂರು, ಆ.31: ನಗರದ ಪ್ರತಿಷ್ಠಿತ ಎ.ಜೆ. ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕಾಲೇಜು ಮಟ್ಟದ ವೈದ್ಯಕೀಯ ಶಾಸ್ತ್ರದ ಬಗ್ಗೆ 8ನೇ ವಾರ್ಷಿಕ ‘ಮೆಡಿಕ್ವಿಜ್’ ರಸ ಪ್ರಶ್ನಾ ಸ್ಪರ್ಧಾ ಕೂಟವು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್ ಹೆಗ್ಡೆ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ನಿಯತಕಾಲಿಕವಾಗಿ ಸ್ಪರ್ಧಾಕೂಟದಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ವೃದ್ಧಿಸಿದರೆ ವೈದ್ಯಕೀಯ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಅಕ್ಟೋಬರ್ 5ರಂದು ಜಿಲ್ಲಾ ಮಟ್ಟದ ಅಂತರ್ ವೈದ್ಯಕೀಯ ಕಾಲೇಜಿನ ರಸ ಪ್ರಶ್ನಾ ಸ್ಪರ್ಧಾಕೂಟ ಆಯೋಜಿಸಲಾಗುವುದು. ಈ ಸ್ಪರ್ಧಾಕೂಟದ ವಿಜೇತರು ಅದರಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ಪ್ರಾಧ್ಯಾಪಕ ಡಾ.ದೇವದಾಸ್ ರೈ ಹೇಳಿದರು.
ಸ್ಪರ್ಧಾ ಕೂಟದ ಪ್ರಥಮ ಸ್ಥಾನ ವಿಜೇತರಾದ ಸಿದ್ಧಾರ್ಥ ರಾವ್ ಮತ್ತು ಸಚಿನ್ ಬೆಕಲ್ ಜೋಡಿ ತಂಡಕ್ಕೆ (90 ಅಂಕ) ಮತ್ತು ದ್ವಿತೀಯ ಸ್ಥಾನ ಪಡೆದ ಸುಧಾಂಶು ಕಶ್ಯಾಪ್ ಮತ್ತು ಅದಿತಿ ಆಚಾರ್ಯ ತಂಡಕ್ಕೆ (60 ಅಂಕ) ಪ್ರಶಸ್ತಿ, ಬಹುಮಾನ ಮತ್ತು ಪ್ರಮಾಣಪತ್ರ ಪ್ರದಾನಿಸಲಾಯಿತು.
ಸ್ಪರ್ಧಾಕೂಟದಲ್ಲಿ ಕಾಲೇಜಿನ 40 ಜೋಡಿ ತಂಡಗಳು ಪ್ರಾಥಮಿಕ ಹಂತದಲ್ಲಿ ಭಾಗವಹಿಸಿದ್ದವು. ಒಂಬತ್ತು ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.
ಹಿರಿಯ ಪ್ರಾಧ್ಯಾಪಕ ಡಾ.ಪ್ರಭಾಕರ್ ರಾವ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಡಾ.ನೂರ್ ಮಿಸ್ಬಾ ಮತ್ತು ಡಾ.ನವಮಿ ಶೆಟ್ಟಿ ಸ್ಪರ್ಧಾಕೂಟಕ್ಕೆ ಸಹಕರಿಸಿದ್ದರು. ಡಾ.ಅದಿತಿ ಸಂತೋಷ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ದೇವದಾಸ್ ರೈ ನಿರೂಪಿಸಿದರು. ಡಾ.ರಾಹುಲ್ ಶೆಣೈ ವಂದಿಸಿದರು.