ಅಂಜುಮನ್ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರಿಡಾ ದಿವಸ್, ಸದೃಢ ಭಾರತ ಅಭಿಯಾನ
ಭಟ್ಕಳ : ಕ್ರೀಡೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯವಶ್ಯವಾಗಿದ್ದು ಮಕ್ಕಳು ಮತ್ತು ಯುವಜನತೆ ಆಟೋಟಗಳಲ್ಲಿ ಭಾಗವಿಸುವುದರ ಮೂಲಕ ತಮ್ಮ ಶಾರೀರಿಕ, ಮಾನಸಿಕ, ಬೌದ್ಧಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಅಂಜುಮನ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಮುಸ್ತಾಕ್ ಕೆ. ಶೇಖ್ ಕರೆ ನೀಡಿದರು.
ಅವರು ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡ ‘ರಾಷ್ಟ್ರೀಯ ಕ್ರಿಡಾ ದಿವಸ್’ ಮತ್ತು ‘ಸದೃಢ ಭಾರತ ಅಭಿಯಾನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮೇಲಿನಂತೆ ಕರೆ ನೀಡಿದರು.
ಭಾರತದ ಗೌರವವನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಹಾಕಿಪಟು ಧ್ಯಾನಚಂದ್ ಅವರ ಜನ್ಮದಿನದಂದು ಆಚರಿಸುತ್ತಿರುವ ಈ ಕಾರ್ಯಕ್ರಮ ಅರ್ಥಪೂರ್ಣ ಎಂದು ಬಣ್ಣಿಸಿದ ಅವರು, ವಿದ್ಯಾರ್ಥಿ ಸಮುದಾಯಕ್ಕೆ ಧ್ಯಾನಚಂದ್ ಒಂದು ಮಾದರಿ ಎಂದು ಹೇಳಿದರು.
ಈ ಸಂದರ್ಭ ಸದೃಢ ಭಾರತ ಅಭಿಯಾನದ ಕುರಿತು ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ. ಆರ್. ಎಸ್. ನಾಯಕ ಮಾತನಾಡುತ್ತ, ದೇಶ ಸರ್ವತೋಮುಖ ಬೆಳವಣಿಗೆಯನ್ನು ಹೊಂದಿ ಸದೃಢಗೊಳ್ಳಲು ಜನರಷ್ಟೇ ಸದೃಢರಾದರೆ ಸಾಲುವುದಿಲ್ಲ, ಅವರೊಟ್ಟಿಗೆ ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ, ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಇತ್ಯಾದಿ ಕ್ಷೇತ್ರಗಳು ಆರೋಗ್ಯಪೂರ್ಣವಾಗಿದ್ದರೆ ಮಾತ್ರ ಸದೃಢ ಭಾರತ ನಿರ್ಮಾಣವಾಗುತ್ತದೆ. ಆದರೆ ಈ ಎಲ್ಲ ಕ್ಷೇತ್ರಗಳು ಅದೃಢವಾಗಿಲ್ಲವೆಂದು ಅವರು ವಿಷಾದಿಸಿದರು.
ಹಿರಿಯ ಉಪನ್ಯಾಸಕರಾದ ಪ್ರೊ. ಎಸ್. ಎ. ಇಂಡಿಕರ್ ಮತ್ತು ಪ್ರೊ. ಎಂ. ಎಂ. ಜಮಾದಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭವ್ಯಾ ನಾಯಕ ಆರಂಭದಲ್ಲಿ ಸ್ವಾಗತಿಸಿದರೆ, ಕೊನೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ. ಖಲಿಮುಲ್ಲಾ ವಂದಿಸಿದರು. ಫಾತಿಮಾ ಮತ್ತು ಸಂಗಡಿಗರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.