ರಾಜ್ಯ ಪ್ರವಾಹದಿಂದ ತತ್ತರಿಸಿ ಹೋಗಿದ್ದರೂ ಪ್ರಧಾನಿ ಇನ್ನೂ ರಾಜ್ಯಕ್ಕೆ ಭೇಟಿ ನೀಡಿಲ್ಲ: ಸಿದ್ದರಾಮಯ್ಯ
ಬೆಳ್ತಂಗಡಿ: ರಾಜ್ಯ ಪ್ರವಾಹದಿಂದ ತತ್ತರಿಸಿ ಹೋಗಿದ್ದರೂ ಪ್ರಧಾನಿಯವರು ಇನ್ನೂ ರಾಜ್ಯಕ್ಕೆ ಭೇಟಿ ನೀಡಿಲ್ಲ, ಕೇಂದ್ರ ಸರಕಾರ ಇನ್ನೂ ಒಂದು ರೂಪಾಯಿ ನೀಡಿಲ್ಲ, ರಾಜ್ಯದಿಂದ ಇಪ್ಪತ್ತೈದು ಜನ ಬಿಜೆಪಿ ಸಂಸದರಿದ್ದಾರೆ ಅವರು ಪ್ರಧಾನಿಯನ್ನು ಕರೆತಂದು ಪರಿಹಾರ ನೀಡುವಂತೆ ಮಾಡಬೇಕಾಗಿತ್ತು ಆದರೆ ಏನು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಪ್ರವಾಹ ಸಂತ್ರಸ್ತರ ಬಗ್ಗೆ, ಜನಸಾಮಾನ್ಯರ ಬಗ್ಗೆ ಇವರಿಗೆ ಕಾಳಜಿಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೋದಿಯವರು ಕರ್ನಾಟಕದ ಓಟು ತೆಗೆದುಕೊಂಡು ಹೋದರೇ ಹೊರತು ಅವರಿಗೆ ರಾಜ್ಯದ ಜನತೆಯ ಬಗ್ಗೆ ಕಾಳಜಿಯಿಲ್ಲ ಎಂದ ಅವರು ಹಿಂದೆ ರಾಜ್ಯದಲ್ಲಿ ಪ್ರವಾಹ ಸಂಭವಿಸಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡಲೇ ರಾಜ್ಯಕ್ಕೆ ಬಂದು 1600 ಕೋಟಿ ರೂ. ಪರಿಹಾರ ನೀಡಿದ್ದರು ಈ ಮಾದರಿಯನ್ನು ಅನುಸರಿಸಲಿ ಎಂದರು.
ಕುಣಿಯಲಾರದ ನೃತ್ಯಗಾರ್ತಿ ನೆಲಡೊಂಕೆಂದಳು ಎಂಬುದು ನಮ್ಮ ಪ್ರದೇಶದ ಗಾದೆ ಅದನ್ನು ಬಿಜೆಪಿಯವರನ್ನು ಉದ್ದೇಶಿಸಿ ಹೇಳಿದ್ದೇನೆ, ಸರಕಾರ ಮಾಡಿದರೂ ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ಅವರು ರಚಿಸುವುದಿಲ್ಲ, ಸರಿಯಾಗಿ ಆಡಳಿತ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ಏನೇನೋ ಉಪಾಯಗಳನ್ನು ಹೇಳುತ್ತಿದ್ದಾರೆ ಎಂದರು.
ಸಮ್ಮಿಶ್ರ ಸರಕಾರ ಉರುಳಿಸಿದ್ದು ನೀವೆಂದು ದೇವೇಗೌಡರು ಹೇಳುತ್ತಿದ್ದಾರಲ್ಲ ಎಂದಾಗ ಅದನ್ನು ಮಾಡಿದವರು ಬಿಜೆಪಿಯವರು ಮತ್ತು ದೇವೇಗೌಡರೇ ಎಂದು ನಾನು ಈಗಾಗಲೆ ಹೇಳಿದ್ದೇನಲ್ಲ ಎಂದರು. ಕುಣಿಯಲು ಬಾರದವರು ರಂಗಸ್ಥಳ ಸರಿ ಇಲ್ಲ ಅಂದಂತೆ ಅವರು ಯಾವ ಕೆಲಸವನ್ನೂ ಸುಸೂತ್ರವಾಗಿ ಮಾಡುವುದಿಲ್ಲ ಎಂದರು.
ಪಶ್ಚಿಮ ಘಟದಲ್ಲಿ ಆಗುತ್ತಿರುವ ಭೂ ಕುಸಿತಗಳ ಬಗ್ಗೆ ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ. ಜನವಸತಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರದೇಶಗಳು ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಬೇಕಾಗಿದೆ. ಇದಕ್ಕಾಗಿ ವಿಜ್ಞಾನಿಗಳ ತಂಡವನ್ನು ಕಳುಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮಳೆಯನ್ನೂ ಲೆಕ್ಕಿಸದೆ ಪ್ರವಾಹ ಸಂತ್ರಸ್ತರ ಭೇಟಿ
ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಮಾಜಿ ಮುಖ್ಯಮಂತ್ರಿಗಳು ಸೇತುವೆ ಕೊಚ್ಚಿ ಹೋದ ಕಾರಣ ಈಗಲೂ ಸಂಪರ್ಕಸಾಧಿಸಲು ಸಾಧ್ಯವಿಲ್ಲದೆ ದ್ವೀಪವಾಗಿ ಮಾರ್ಪಟ್ಟಿರುವ ಮೂಲನಿವಾಸಿ, ಆದಿವಾಸಿಗಳು ವಾಸಿಸುತ್ತಿರುವ ಅನಾರಿಗೆ ಭೇಟಿ ನಿಡಿದರು.
ಮುಖ್ಯ ರಸ್ತೆಯಿಂದ ಸುಮಾರು ಮೂರು ಕಿ.ಮೀ ದೂರ ಕಾಡುದಾರಿಯ ಕಚ್ಚಾರಸ್ತೆಯಲ್ಲಿ ಸಂಚರಿಸಿದ ಅವರು ಕಸಿದ ಸೇತುವೆ ವೀಕ್ಷಿಸಿ ನದಿಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಸ್ಥಳೀಯ ನಿವಾಸಿಗಳತ್ತ ಕೈ ಬೀಸಿ ಧೈರ್ಯ ತುಂಬಿದರು, ಪ್ರವಾಹದಿಂದಾಗಿ ಅತ್ಯಂತ ಹೆಚ್ಚು ಹಾನಿಗೆ ಒಳಗಾಗಿರುವ ಚಾರ್ಮಾಡಿ ಗ್ರಾಮದ ಪರ್ಲಾನಿಗೆ ಭೇಟಿ ನೀಡಿದ ಅವರು ಸುರಿಯುತ್ತಿದ್ದ ಭಾರೀ ಮಳೆಯನ್ನೂ ಲೆಕ್ಕಿಸದೆ ಅಲ್ಲಿನ ಜನರು ಮುಂದಿಟ್ಟ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದರು ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಬೆಳ್ತಂಗಡಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಮಾಜಿ ಶಾಸಕ ಕೆ ವಸಂತ ಬಂಗೇರ ಅವರು ಸ್ವಾಗತಿಸಿದರು. ಬಳಿಕ ವಸಂತ ಬಂಗೇರ ಅವರ ಕಚೇರಿಗೆ ತೆರಳಿ ಮಾತುಕತೆ ನಡೆಸಿದರು, ತಾಲೂಕಿನಲ್ಲಿ ಆಗಿರುವ ಅನಾಹುತಗಳ ಬಗ್ಗೆ ಅವರು ಮಾಜಿ ಮುಖ್ಯಮಂತ್ರಿಗಳಿಗೆ ವಿವರಿಸಿದರು. ಬಳಿಕ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಧನೆ ಸಲ್ಲಿಸಿದರು. ಶಾಂತಿವನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಯು.ಟಿ.ಖಾದರ್, ಎಂಎಲ್ಸಿ ಐವನ್ ಡಿಸೋಜಾ, ಮಾಜಿ ಶಾಸಕ ಮೊಯ್ದಿನ್ ಬಾವಾ, ಕಾಂಗ್ರೆಸ್ ಯೂತ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಅಧ್ಯಕ್ಷರಾದ ರಾಜಶೇಖರ ಅಜ್ರಿ ಮತ್ತು ಶ್ರೀನಿವಾಸ ಕಿಣಿ, ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ, ಸದಸ್ಯ ಪೀತಾಂಬರ ಹೇರಾಜೆ, ಜಿಪಂ ಸದಸ್ಯರಾದ ಶೇಖರ ಕುಕ್ಕೇಡಿ, ಸಾಹುಲ್ ಹಮೀದ್, ನಮಿತಾ, ತಾಪಂ ಅಧ್ಯಕ್ಷೆ ದಿವ್ಯ ಜ್ಯೋತಿ, ಎ.ಪಿ ಎಂಸಿ ಅಧ್ಯಕ್ಷ ಕೇಶವ ಗೌಡ, ಉಪಾಧ್ಯಕ್ಷ ವಿ.ಟಿ.ಸೆಬಾಸ್ಟಿನ್, ಸದಸ್ಯರಾದ ಪ್ರವೀಣ್ ಗೌಡ, ಕೇಶವತಿ, ವಿನುಷಾ ಪ್ರಕಾಶ್, ಜಯಶೀಲ, ಸುಶೀಲ ಪಡಂಗಡಿ, ಜಯರಾಮ್, ಮಾಜಿ ಮೇಯರ್ ಕವಿತಾ ಸನಿಲ್, ಪ್ರಮುಖರಾದ ಅಭಿನಂದನ್ ಹರೀಶ್, ಉಷಾ ಶರತ್, ಹಾಜಿರಾ, ಅಶ್ರಫ್, ಪ್ರಭಾಕರ ಧರ್ಮಸ್ಥಳ, ಜಯವಿಕ್ರಮ, ಜಗದೀಶ್ ಡಿ., ನವೀನ್ ರೈ ಉಪಸ್ಥಿತರಿದ್ದರು.
ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ
ಮಾಜಿ ಮುಖ್ಯಮಂತ್ರಿಗಳು ಚಾರ್ಮಾಡಿ ಗ್ರಾ. ಪಂ ವ್ಯಾಪ್ತಿಯ ಪರ್ಲಾನಿಗೆ ಭೇಟಿ ನೀಡಿದಾಗ ಅಲ್ಲಿಗೆ ಆಗಮಿಸಿದ ಸಂತ್ರಸ್ತ ಕುಟುಂಬಗಳು ನಮ್ಮ ತೋಟಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ, ಮನೆಗೆ ಏನೂ ಆಗಿಲ್ಲ ನಮಗೆ ಈ ವರೆಗೆ ಒಂದು ರೂ. ಪರಿಹಾರ ದೊರೆತಿಲ್ಲ. ನಾವು ಹೇಗೆ ಬದುಕಬೇಕು ಎಂದೇ ತಿಳಿಯುತ್ತಿಲ್ಲ ಎಂದಾಗ ನೇರವಾಗಿ ದ.ಕ. ಜಿಲ್ಲಾಧಿಕಾರಿಯವರಿಗೆ ಕರೆ ಮಾಡಿದ ಮಾಜಿ ಮುಖ್ಯಮಂತ್ರಿ ಈ ಕುಟುಂಬಗಳ ಅಳನ್ನು ಕೇಳಿ ಅವರಿಗೆ ಕೂಡಲೇ ಸೂಕ್ತ ಪರಿಹಾರ ಒದಗಿಸಿ ಎಂದು ಸೂಚಿಸಿದರು.
ಕೃಷಿ ಕಳೆದು ಕೊಂಡವರಿಗೂ ಪರಿಹಾರ ನೀಡಿ
ಕೇವಲ ಮನೆ ಕಳೆದುಕೊಂಡವರಿಗೆ ತಲಾ 10 ಸಾವಿರ ರೂ. ತಕ್ಷಣದ ಪರಿಹಾರ ನೀಡಿದ್ದಾರೆ, ತಮ್ಮ ಇಡೀ ಕೃಷಿ ಭೂಮಿಯನ್ನು ಕಳೆದು ಕೊಂಡವರಿಗೆ ಯಾವುದೇ ಕನಿಷ್ಟ ಪರಿಹಾರವನ್ನೂ ನೀಡಲಾಗಿಲ್ಲ ಇದು ಸರಿಯಾದ ಕ್ರಮವಲ್ಲ, ಕೃಷಿ ಭೂಮಿ ಹಾಗೂ ಸರ್ವಸ್ವವನ್ನೂ ಕಳೆದುಕೊಂಡವರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದರು.
ದಲಿತ ಸಂಘರ್ಷ ಸಮಿತಿಯಿಂದ ಮನವಿ
ಪ್ರವಾಹ ಪಿಡಿತ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ದಲಿತ ಸಮಗರ್ಷ ಸಮಿತಿ(ಅಂಬೇಡ್ಕರ್ ವಾದ) ಮುಖಂಡರುಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಸಲ್ಲಿಸಿದರು.