×
Ad

ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್ ಪಡೆದವರು ಕೂಡಲೇ ಹಿಂದಿರುಗಿಸಿ: ಡಿಸಿ ಜಗದೀಶ್ ಸೂಚನೆ

Update: 2019-08-31 20:43 IST

ಉಡುಪಿ, ಆ.31: ಅನ್ನಭಾಗ್ಯ ಯೋಜನೆಯಡಿ ದುರ್ಬಲ ಕುಟುಂಬಗಳಿಗೆ ನೀಡುವ ಬಿಪಿಎಲ್ ಕಾರ್ಡ್‌ನ್ನು ಆರ್ಥಿಕವಾಗಿ ಸದೃಢವಾದ ಕೆಲವು ಕುಟುಂಬಗಳು ನಿಗದಿತ ಮಾನದಂಡವನ್ನು ಉಲ್ಲಂಘಿಸಿ, ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದರಡಿಗಿಂತ ದೊಡ್ಡದಾದ ಪಕ್ಕಾ ಮನೆ ಹೊಂದಿರುವ ಕೆಲವು ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿರುವುದು, ಅದೇ ರೀತಿ ಶಿಕ್ಷಣ (ಅನುದಾನಿತ ಶಾಲಾ ಕಾಲೇಜು ನೌಕರರು)/ಸಾರಿಗೆ/ವಿದ್ಯುತ್/ರೈಲ್ವೆ/ಪೊಲೀಸ್/ ಮೊದಲಾದ ಇಲಾಖೆಗಳಲ್ಲಿ ಸರಕಾರಿ ನೌಕರಿ ಮಾಡುತ್ತಿರುವ ಕೆಲವರು ತಮ್ಮ ಹೆಸರನ್ನು ತೆಗೆದು ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಪಡೆದು ವಂಚಿಸಿರುವುದು ಕಂಡುಬಂದಿದೆ.

ಅಲ್ಲದೇ ಸಹಕಾರಿ ಸಂಘಗಳ ನೌಕರರು/ನಿಗಮ ಮತ್ತು ಮಂಡಳಿ ನೌಕರರು/ಬ್ಯಾಂಕ್/ಆಸ್ಪತ್ರೆ ನೌಕರರು/ಆಡಿಟರ್ಸ್‌, ಹೊಟೇಲ್ ಮಾಲಕರು/ವರ್ತಕರು ಬಿಪಿಎಲ್ ಕಾರ್ಡ್ ಪಡೆದಿದ್ದು, ಸ್ವಂತ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವವರು ಗುತ್ತಿಗೆದಾರರು, ಕುಷನ್ ಎಜೆಂಟ್‌ದಾರರು, ಮನೆ ಮಳಿಗೆ ಕಟ್ಟಡವನ್ನು ಬಾಡಿಗೆ ನೀಡಿ ವರಮಾನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯು ತ್ತಿರುವ ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ್ದಾರೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರಕಾರವು ಬಿಪಿಎಲ್ ಪಡಿತರ ಚೀಟಿ ಪಡೆಯಲು 1,20,000 ರೂ. ಆದಾಯ ಮಿತಿಯನ್ನು ನಿಗದಿ ಪಡಿಸಿದ್ದು ಆ ಆದಾಯದ ಮಿತಿಯನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿರುವುದು ತಿಳಿದುಬಂದಿದೆ. ಮೇಲ್ಕಂಡ ಈ ಎಲ್ಲಾ ಅನರ್ಹರು ಪಡೆದಿರುವ ಕಾರ್ಡ್‌ನ್ನು ಪತ್ತೆ ಹಚ್ಚಿ ರದ್ದು ಪಡಿಸುವ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳು ಹೊಂದಿರುವ ಕಾರ್ಡ್‌ನ್ನು ಸೆ.10ರೊಳಗೆ ಹಿಂದಿರುಗಿಸಿ, ಇಲ್ಲವಾದರೆ ಅಂತಹ ಅನರ್ಹ ಕಾರ್ಡ್‌ಗಳನ್ನು ಪತ್ತೆ ಹಚ್ಚಿ, ರದ್ದುಪಡಿಸಿ ಅವರ ವಿರುದ್ಧ ಈವರೆಗೆ ಪಡೆದಿರುವ ಆಹಾರ ಧಾನ್ಯಕ್ಕೆ ಮುಕ್ತ ಮಾರುಕಟ್ಟೆ ದರದ 3 ಪಟ್ಟು ಹೆಚ್ಚು ವಸೂಲಿ ಮಾಡಲಾಗುವುದು ಮತ್ತು ಅಕ್ರಮವಾಗಿ ರೇಷನ್ ಕಾರ್ಡ್‌ನ್ನು ಹೊಂದಿರುವುದನ್ನು ನಿಷೇಧಿಸುವ 1977ರ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು, ಅಲ್ಲದೇ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News