ಬ್ಯಾಂಕ್ ವಿಲೀನಿಕರಣದ ಹಿಂದೆ ಹಿಡನ್ ಅಜೆಂಡಾ: ರಾಮಮೋಹನ್

Update: 2019-08-31 15:24 GMT

ಉಡುಪಿ, ಆ.31: ಕೇಂದ್ರ ಸರಕಾರ 10 ಸಾರ್ವಜನಿಕ ರಂಗದ ಬ್ಯಾಂಕ್ ಗಳನ್ನು ವಿಲೀನಿಕರಣ ಮಾಡುವ ಏಕಪಕ್ಷೀಯ ನಿರ್ಣಯವನ್ನು ಕೈಗೊಂಡಿದ್ದು, ಸರಕಾರದ ಈ ನಡೆಯ ಹಿಂದೆ ಹಿಡನ್ ಅಜೆಂಡಾ ಅಡಗಿದೆ ಎಂದು ಬ್ಯಾಂಕ್ ನೌಕರರ ಸಂಘಟನೆಯ ಪ್ರಮುಖ ರಾಮಮೋಹನ್ ಆರೋಪಿಸಿದ್ದಾರೆ.

ಬ್ಯಾಂಕ್ ವಿಲೀನಿಕರಣಗೊಳಿಸಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಶನಿವಾರ ಕಾರ್ಪೊರೇಶನ್ ಬ್ಯಾಂಕ್ ಉಡುಪಿ ವಲಯ ಕಚೇರಿ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಈಗಾಗಲೇ ಮಾಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಸಹವರ್ತಿ ಬ್ಯಾಂಕ್‌ಗಳ ವಿಲೀನ ಹಾಗೂ ವಿಜಯ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ವಿಲೀನ ವಿಫಲವಾಗಿದೆ. ಆದರೂ ಮತ್ತೆ 10 ಬ್ಯಾಂಕ್‌ಗಳನ್ನು ವಿಲೀನಿಕರಿಸಿ ನಾಲ್ಕು ಬ್ಯಾಂಕ್‌ಗಳನ್ನಾಗಿ ಮಾಡಿರುವುದು ಆರು ಬ್ಯಾಂಕ್‌ಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ. ವಿಲೀನದಿಂದ ಬ್ಯಾಂಕ್ ಗಳ ಶಕ್ತಿ ಹೆಚ್ಚುವುದಿಲ್ಲ. ಅನುತ್ಪಾದಕ ಆಸ್ತಿಯ ಪ್ರಮಾಣ ತಗ್ಗುವುದಿಲ್ಲ ಮತ್ತು ಸಾಲ ನೀಡುವ ಶಕ್ತಿಯೂ ಹೆಚ್ಚಾಗಲ್ಲ ಎಂದು ಅವರು ಟೀಕಿಸಿದರು.

ಪ್ರಸಕ್ತ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಕೈಗಾರಿಕಾ ರಂಗ ಕೂಡ ನಿರಾಶದಾಯಕ ಪರಿಸ್ಥಿತಿಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗಳ ವಿಲೀನಿಕರಣದ ನಿರ್ಣಯದಿಂದ ಹಿನ್ನಡೆ ಉಂಟಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ಇನ್ನು ತೀವ್ರವಾಗಿ ಕಾಡಲಿದೆ. ಪ್ರಸ್ತುತ ದೇಶಕ್ಕೆ ಸಶಕ್ತ ಬ್ಯಾಂಕ್‌ಗಳ ಅವಶ್ಯಕತೆ ಇದೆಯೇ ಹೊರತು ಗಾತ್ರದಲ್ಲಿ ದೊಡ್ಡ ಬ್ಯಾಂಕ್‌ಗಳಲ್ಲ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕಿನ ಶಶಿಧರ್ ಶೆಟ್ಟಿ, ಕರ್ಣಾಟಕ ಬ್ಯಾಂಕಿನ ನಿತ್ಯಾನಂದ, ಕಾರ್ಪೊರೇಶನ್ ಬ್ಯಾಂಕಿನ ಮನೋಜ್ ಕುಮಾರ್, ರಮೇಶ್, ಭಾರತೀಯ ಸ್ಟೇಟ್ ಬ್ಯಾಂಕಿನ ಸುಪ್ರಿಯಾ, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.

ಧರಣಿಯಲ್ಲಿ ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಹೆರಾಲ್ಡ್ ಡಿಸೋಜ, ಕೆನರಾ ಬ್ಯಾಂಕಿನ ವರದರಾಜ, ಅಧಿಕಾರಿಗಳ ಸಂಘಟನೆಯ ಅಶೋಕ್ ಕೋಟ್ಯಾನ್, ರವಿಶಂಕರ್, ನೌಕರರ ಸಂಘಟನೆಯ ನಾಗೇಶ್ ನಾಯಕ್, ರವೀಂದ್ರ, ಜಯನ್ ಮಲ್ಪೆ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News