ನೋವಿಲ್ಲದಂತೆ ಹಿತ ನೀಡುವುದೇ ಸಾಹಿತ್ಯ: ಡಾ.ಸುರೇಶ್ ನೆಗಳಗುಳಿ
ಉಡುಪಿ, ಆ.31: ಉಪಮೇಯ ಇಲ್ಲದೆ ಜೀವನವೇ ಇಲ್ಲವಾಗಿದೆ. ಆಡು ಮಾತಿನಲ್ಲಿ ಎಲ್ಲರು ಕೂಡ ಕವಿಗಳೇ ಆಗಿದ್ದರೆ. ಕವಿತ್ವ ಎಂಬುದು ಲೇಖತ್ವ ಆಗುವ ಒಂದು ಘಟ್ಟ ಆಗಿದೆ. ನೋವು ಇಲ್ಲದಂತೆ ಮಾಡಿ, ಹಿತ ಹಾಗೂ ಉತ್ತಮ ಸಂವೇದನೆ ನೀಡುವುದೇ ಸಾಹಿತ್ಯ ಎಂದು ಮಂಗಳೂರಿನ ವೈದ್ಯ ಹಾಗೂ ಲೇಖಕ ಡಾ.ಸುರೇಶ್ ನೆಗಳಗುಳಿ ಹೇಳಿದ್ದಾರೆ.
ಸಂವೇದನ ಫೋರಮ್ ಫಾರ್ ಆರ್ಟ್, ಕಲ್ಚರ್ ಆ್ಯಂಡ್ ಲಿಟ್ರೇಚರ್ ವತಿಯಿಂದ ಪ್ರಕಟಗೊಂಡ ಉದಯೋನ್ಮುಖ ಕವಿ ಎಂ.ಅಶೀರುದ್ದೀನ್ ಮಂಜ ನಾಡಿ ಅವರ ‘ಅಶೀರನ ಕವನಗಳು’ ಚೊಚ್ಚಲ ಕವನ ಸಂಕಲವನ್ನು ಶನಿವಾರ ಉಡುಪಿಯ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲಿನ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಒಂದು ಯೋಚನೆ ಅಥವಾ ವಿಷಯವನ್ನು ಪ್ರಾಪಂಚಿಕ ವಾಗಿ ಮಾಡುವುದು ಪ್ರತಿಯೊಬ್ಬ ಬುದ್ಧಿವಂತನ ಕರ್ತವ್ಯವಾಗಿದೆ. ಮನಸ್ಸಿನಲ್ಲಿ ಮೂಡುವ ಭಾವನೆ ಯನ್ನು ಒಟ್ಟು ಸೇರಿಸಿ, ಅದಕ್ಕೆ ಹೊಸ ರೂಪ ನೀಡಿ, ಆ ಮೂಲಕ ಹೊಸ ಯುಕ್ತಿಯನ್ನು ವೃಜಿಸಿ ಹೊರಹೊಮ್ಮಿಸುವ ಕ್ರಿಯೆಯೇ ಕವನ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಸಂವೇದನ ಅಧ್ಯಕ್ಷ ಕಿದಿಯೂರು ನಿಹಾಲ್ ಸಾಹೇಬ್ ವಹಿಸಿದ್ದರು. ಕವಿ ಜಿ.ಎಂ.ಶರೀಫ್ ಹೂಡೆ, ಸಾಮಾಜಿಕ ಹೋರಾಟಗಾರ ಅಬ್ದುಲ್ ಕರೀಂ ಮುಖ್ಯ ಅತಿಥಿಗಳಾಗಿದ್ದರು. ಕವಿ ಎಂ.ಅಶೀರುದ್ದೀನ್ ಮಂಜನಾಡಿ ಉಪಸ್ಥಿತರಿದ್ದರು. ಸಂವೇದನ ಕಾರ್ಯದರ್ಶಿ ಎಂ.ದಾನಿಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರೂಕ್ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.