×
Ad

ಉಡುಪಿ ಜಿಲ್ಲೆಯ ರೈತರ ಬೇಡಿಕೆಗಳ ಈಡೇರಿಕೆಗೆ ಶೀಘ್ರವೇ ಸಭೆ: ಕೋಟ ಭರವಸೆ

Update: 2019-08-31 22:42 IST

ಉಡುಪಿ, ಆ.31: ಜಿಲ್ಲೆಯ ರೈತರ ಪ್ರಮುಖ ಬೇಡಿಕೆಗಳಾದ ಕುಮ್ಕಿ ಮತ್ತು ಗೇರುಲೀಸ್ ಭೂಮಿಗಳ ಮಂಜೂರಾತಿ, ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನ, ಕಾಡುಪ್ರಾಣಿಗಳ ಸಮಸ್ಯೆಗೆ ಪರಿಹಾರ ಮೊದಲಾದ ವಿಷಯಗಳ ಬಗ್ಗೆ ರೈತರ, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಪ್ರತ್ಯೇಕ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಂಡು ಆದಷ್ಟು ಶೀಘ್ರದಲ್ಲಿ ಅನುಷ್ಠಾನ ಗೊಳಿಸಲು ಸರಕಾರದಿಂದ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ಇಂದು ತನ್ನನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನವೀನ್‌ಚಂದ್ರ ಜೈನ್ ನೇತೃತ್ವದ ನಿಯೋಗಕ್ಕೆ ಸಚಿವರು ಈ ಭರವಸೆ ನೀಡಿದರು. ಈ ಜಿಲ್ಲೆಯ ರೈತರು ಬಹುದಿನಗಳಿಂದ ಸಲ್ಲಿಸುತ್ತಾ ಬಂದಿರುವ ಬೇಡಿಕೆಗಳ ವಿಚಾರಗಳಿಗೆ ಆಧ್ಯತೆ ಮೇರೆಗೆ ತೀರ್ಮಾನ ಕೈಗೊಳ್ಳಲು ಸರಕಾರ ಬದ್ಧವಿದೆ ಎಂದವರು ಹೇಳಿದರು.

ಪ್ರತಿ ವಿಚಾರಗಳಿಗೆ ಪ್ರತ್ಯೇಕ ಸಭೆ ಕರೆದು ತೀರ್ಮಾನ ಕೈಗೊಂಡು, ನಂತರ ಅವಿಭಜಿತ ದ.ಕ. ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಮಾತನಾಡಿ ಅಂತಿಮ ರೂಪುರೇಷೆಗಳನ್ನು ತೀರ್ಮಾನಿಸಿ, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಅಂತಿಮ ನಿರ್ಧಾರಕ್ಕೆ ಬರಲು ತಮ್ಮಿಂದ ಸಾಧ್ಯವಾದ ಎಲ್ಲಾ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಬಳಿಕ ಭಾಕಿಸಂನ ಪ್ರಮುಖ ಪದಾಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದ ಕೋಟ, ಕುಮ್ಕಿ, ಗೇರುಲೀಸ್ ಮೊದಲಾದ ಕೃಷಿಕರ ಹಕ್ಕಿನ ಭೂಮಿಗಳ ಮಂಜೂರಾತಿಗೆ ಸಂಬಂಧಿಸಿದ ಕಾನೂನಿನ ತೊಡಕುಗಳು ಮತ್ತು ಪರಿಹಾರ, ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ರೈತರ ಸ್ಪಂದನೆ ಹಾಗೂ ಸಾಧಕ-ಬಾಧಕಗಳು, ಕಾಡುಪ್ರಾಣಿಗಳ ಉಪಟಳಕ್ಕೆ ಪರಿಹಾರ ಕಂಡುಕೊಳ್ಳಲು ಜಿಲ್ಲೆಯ ಅಧ್ಯಯನ ತಂಡ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯ ಅನುಷ್ಠಾನ, ಪ್ರಾಕೃತಿಕ ವಿಕೋಪ, ಅಡಿಕೆ ಕೊಳೆರೋಗಗಳಿಂದ ರೈತರಿಗಾದ ನಷ್ಟಕ್ಕೆ ಪರಿಹಾರ, ಸಾಲಮನ್ನಾ, ಬೆಳೆವಿಮೆ, ಮೊದಲಾದ ವಿಚಾರದಲ್ಲಿ ಚರ್ಚಿಸಿದರು.

ನಿಯೋಗದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವಿ.ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಪ್ರಮುಖರಾದ ಸೀತಾರಾಮ ಗಾಣಿಗ, ಆಸ್ತೀಕ ಶಾಸ್ತ್ರೀ, ಸುಂದರ ಶೆಟ್ಟಿ, ಕೆ.ಪಿ.ಭಂಡಾರಿ, ರಾಜೀವ ಶೆಟ್ಟಿ, ವಿಶ್ವನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News