×
Ad

ಸೆ.1ರಿಂದ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ

Update: 2019-08-31 22:47 IST

ಮಂಗಳೂರು, ಆ.31: ದ.ಕ. ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮ (ಇವಿಪಿ) ಸೆ.1ರಿಂದ ಅಕ್ಟೋಬರ್ 15ರವರೆಗೆ ನಡೆಯಲಿದೆ.

ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ದೋಷ, ಹೆಸರಿನಲ್ಲಿ ವ್ಯತ್ಯಾಸ, ಹೆಸರು ನಾಪತ್ತೆ, ಮೃತರ ಹೆಸರು ಮತ್ತಿತರ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ದೋಷಗಳನ್ನು ಸರಿಪಡಿಸಿ ಮತದಾರರ ಭಾವಚಿತ್ರ ಹಾಗೂ ವಿವರಗಳನ್ನು ಸಮರ್ಪಕವಾಗಿ ನಮೂದಿಸುವ ಕಾರ್ಯ ನಡೆಯುತ್ತಿದೆ.

ನಾಗರಿಕರು ಈ ಅವಧಿಯಲ್ಲಿ ಸ್ವಯಂ ಮುಂದೆ ಬಂದು ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ದೃಢೀಕರಿಸಿಕೊಳ್ಳಬಹುದು. ತಮ್ಮ ಹೆಸರು ಮತ್ತು ಭಾವಚಿತ್ರದಲ್ಲಿ ಯಾವುದೇ ತಪ್ಪುಗಳಿದ್ದಲ್ಲಿ, ಕುಟುಂಬ ಸದಸ್ಯರ ವಿವರಗಳನ್ನು ಪರಿಶೀಲಿಸಲು, ಮತಗಟ್ಟೆಗಳ ವಿವರ ಪಡೆಯಲು, ಮತದಾರರ ಪಟ್ಟಿಯನ್ನು ಶುದ್ಧಗೊಳಿಸಲು ಸೂಕ್ತ ದಾಖಲೆಗಳನ್ನು ಒದಗಿಸಿ ಈ ಸೇವೆಯನ್ನು ಪಡೆಯಬಹುದಾಗಿದೆ.

ಮತದಾರರು ತಮ್ಮ ಹೆಸರು ಸೇರ್ಪಡೆ, ತೆಗೆದು ಹಾಕಲು, ತಿದ್ದುಪಡಿ ಮಾಡಲು, ಪರಿಶೀಲನೆ ಮತ್ತು ದೃಡೀಕರಿಸಲು ಅವಕಾಶವಿದೆ. ಚುನಾವಣಾ ಆಯೋಗವು ಅನುಮೋದಿಸಿರುವ ಯಾವುದೇ ದಾಖಲೆಗಳನ್ನು (ಪಾಸ್‌ಪೋರ್ಟ್/ಡ್ರೈವಿಂಗ್ ಲೈಸನ್ಸ್/ಆಧಾರ್ ಕಾರ್ಡ್/ಬ್ಯಾಂಕ್ ಪಾಸ್ ಬುಕ್/ರೈತರ ಗುರುತಿನ ಚೀಟಿ ಮತ್ತಿತರ ದಾಖಲೆ) ತಂದು ನಿಗದಿಪಡಿಸಿದ ಕೇಂದ್ರಗಳಲ್ಲಿ ಪರಿಶೀಲನೆ ಮಾಡಬಹುದು.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಫಾರಂ 6, ಹೆಸರು, ಭಾವಚಿತ್ರ ಮತ್ತಿತರ ಮಾಹಿತಿ ತಿದ್ದುಪಡಿ ಮಾಡಲು ಫಾರಂ 8 ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಫಾರಂ 7 ಅರ್ಜಿಗಳನ್ನು ನೀಡಬೇಕು. ನಿಗದಿತ ಕೇಂದ್ರಗಳಲ್ಲಿ ಈ ಅರ್ಜಿಗಳು ಲಭ್ಯವಿದೆ.

ಮತದಾರರ ವಿವರಗಳನ್ನು ಸರಿಪಡಿಸಿ ಶೇ.100ರಷ್ಟು ಶುದ್ಧ ಮತದಾರರ ಪಟ್ಟಿ ತಯಾರಿಸಲು ಪರಿಶೀಲನಾ ಕಾರ್ಯಕ್ರಮ ಸೆ.1ರಿಂದ ನಡೆಯಲಿದ್ದು, ಜಿಲ್ಲೆಯ ಮತದಾರರು ಈ ಅವಕಾಶವನ್ನು ಬಳಸಿಕೊಂಡು ಸಹಕರಿಸಲು ದ.ಕ. ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.

ಮತದಾರರ ಪಟ್ಟಿ ಪರಿಶೀಲಿಸುವ ವಿಧಾನ

ಮತದಾರರು ತಮ್ಮ ಮೊಬೈಲ್‌ನಲ್ಲಿ voter helpline ಎಂಬ ಆ್ಯಪ್‌ನ್ನು ಡೌನ್‌ಲೋಡ್ ಮಾಡಿ ವಿವರಗಳನ್ನು ಅದರಲ್ಲಿ ನಮೂದಿಸಿ ಪರಿಶೀಲಿಸಬಹುದು.

* ನಾಡಕಚೇರಿ, ಮಂಗಳೂರು ಒನ್, ಸೇವಾ ಸಿಂಧು ಮತ್ತಿರರ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದು.

* ಗ್ರಾಮ ಪಂಚಾಯತ್‌ಗಳಲ್ಲಿರುವ ಬಾಪೂಜಿ ಸೇವಾಕೇಂದ್ರ, ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಬಹುದು.
* ತಾಲೂಕು ಕಚೇರಿ, ಎ.ಸಿ. ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದು.
* ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆ ಮಾಡಬಹುದು.
* ವೆಬ್ ಪೋರ್ಟಲ್ www.nvsp.in ಇದರಲ್ಲಿಯೂ ಪರಿಶೀಲಿಸಬಹುದು.
* ತಮ್ಮ ಊರಿನ ಮತಗಟ್ಟೆ ಅಧಿಕಾರಿಗಳಲ್ಲಿ ಪರಿಶೀಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News