ಸ್ಪರ್ಧಾತ್ಮಕ ಪರೀಕ್ಷೆಯ ಗೀಳು ಹೊಂದಿದ್ದ ಪತಿಯನ್ನು ತೊರೆದ ಮಹಿಳೆ

Update: 2019-08-31 17:31 GMT

ಭೋಪಾಲ, ಆ.31: ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಲು ಹಲವಾರು ಕಾರಣಗಳನ್ನು ನೀಡುತ್ತಾರೆ. ಆದರೆ ಮಧ್ಯಪ್ರದೇಶದಲ್ಲಿ ವಿವಾಹ ವಿಚ್ಛೇದನಕ್ಕೆ ನೀಡಿದ ಕಾರಣ ಮಾತ್ರ ವಿಚಿತ್ರವಾಗಿದೆ. ಪತಿ ಸದಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಾ ತನ್ನನ್ನು ಸಂಪೂರ್ಣ ನಿರ್ಲಕ್ಷಿಸಿರುವ ಕಾರಣ ಮಹಿಳೆ ಪತಿಯನ್ನು ತೊರೆದು ತವರು ಮನೆ ಸೇರಿದ್ದಾಳೆ.

ತವರು ಮನೆಗೆ ಹೋದ ಮಹಿಳೆ ಮರಳಿ ಬರಲು ಒಪ್ಪದ ಕಾರಣ ಪತಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ . ಪತಿ ಪಿಎಚ್‌ಡಿ ಪದವೀಧರ. ಭೋಪಾಲದಲ್ಲಿ ಕೋಚಿಂಗ್ ಸೆಂಟರ್ ಒಂದರ ಮಾಲಕ. ಆದರೆ ಸದಾ ಯುಪಿಎಸ್ಸಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಗೀಳು ಹೊಂದಿದ್ದ. ಪೋಷಕರಿಗೆ ಈತ ಒಬ್ಬನೇ ಮಗ. ವಿವಾಹವಾಗಲು ಇಚ್ಛೆ ಇಲ್ಲದಿದ್ದರೂ ತಾಯಿಗೆ ಅಸೌಖ್ಯವಾದ ಕಾರಣ ಮದುವೆಗೆ ಒಪ್ಪಿದ್ದ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಲಹೆಗಾರ್ತಿ ನೂರಾನ್ನೀಸ ಖಾನ್ ಹೇಳಿದ್ದಾರೆ.

 ಮದುವೆಯಾದ ದಿನದಿಂದಲೂ ಪತಿ ತನ್ನೊಂದಿಗೆ ಸಹಬಾಳ್ವೆ ನಡೆಸುತ್ತಿಲ್ಲ. ಸದಾ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲೇ ತೊಡಗಿದ್ದ ಎಂದು ಮಹಿಳೆ ಆರೋಪಿಸಿ ತವರು ಮನೆಗೆ ತೆರಳಿದ್ದಾಳೆ. ಆಕೆ ಪತಿಯ ಮನೆಗೆ ಬರಲು ನಿರಾಕರಿಸಿದ್ದು ಸಂಬಂಧಿಕರು, ಮಿತ್ರರು ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದೆ. ಕಡೆಗೆ ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವುದಾಗಿ ಖಾನ್ ತಿಳಿಸಿದ್ದಾರೆ.

ಇವರಿಬ್ಬರನ್ನು ಇನ್ನಷ್ಟು ಆಪ್ತ ಸಮಾಲೋಚನೆಗೆ ಒಳಪಡಿಸಿ ವಿವಾಹ ಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ . ಸಾಧ್ಯವಾಗದಿದ್ದರೆ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿದ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಖಾನ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News