ಸೆ. 3: ಬ್ಯಾಂಕುಗಳ ವಿಲೀನೀಕರಣವನ್ನು ವಿರೋಧಿಸಿ ಪ್ರತಿಭಟನೆ

Update: 2019-09-01 12:28 GMT

ಮಂಗಳೂರು: ಬ್ಯಾಂಕುಗಳ ವಿಲೀನೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದ ಕ್ರಮವನ್ನು ಖಂಡಿಸಿ ಸಿಐಟಿಯು, ಬಿಇಎಫ್ ಐ,ಡಿವೈಎಫ್ ಐ, ಎಐಕೆಎಸ್ ಸಂಘಟನೆಗಳ ಸಂಯುಕ್ತ ನೇತ್ರತ್ವದಲ್ಲಿ ಸೆ. 3 ರಂದು ಸಂಜೆ 5 ಗಂಟೆಗೆ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಯೆದುರು ಪ್ರತಿಭಟನಾ ಪ್ರದರ್ಶನ ಜರುಗಲಿದೆ ಎಂದು 4 ಸಂಘಟನೆಗಳು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ದೇಶವು ಗರಿಷ್ಠ ಮಟ್ಟದಲ್ಲಿ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆಯೆಂದು ಸ್ವತಃ ರಿಸರ್ವ್ ಬ್ಯಾಂಕ್ ಒಪ್ಪಿಕೊಂಡಿದ್ದರೂ,ಕೇಂದ್ರ ಸರಕಾರವು ಮಾತ್ರ ದೇಶದ ಆರ್ಥಿಕತೆಯು ಭಾರೀ ಪ್ರಗತಿಯಲ್ಲಿದೆ ಎಂದು ಹಸಿಹಸಿ ಸುಳ್ಳು ಹೇಳುತ್ತಿದೆ‌.ಈ ನಡುವೆ ತರಾತು ರಿಯಲ್ಲಿ ಹಲವಾರು ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ. ಬ್ಯಾಂಕುಗಳ ತವರೂರಾದ ಅವಿಭಜಿತ ದ.ಕ.ಜಿಲ್ಲೆಯ ಪ್ರಮುಖ ಬ್ಯಾಂಕುಗಳನ್ನೇ ಇನ್ನಿಲ್ಲವಾಗಿಸಲು ವ್ಯವಸ್ಥಿತ ಹುನ್ನಾರ ನಡೆದಿದೆ. ಬ್ಯಾಂಕುಗಳ ವಿಲೀನದಿಂದಾಗಿ ಉದ್ಯೋಗ ಸ್ರಷ್ಠಿಯ ಬದಲು ಇರುವ ಉದ್ಯೋಗಗಳ ನಾಶವಾಗುತ್ತಿದೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ಇನ್ನಷ್ಟು ಭೀಕರತೆಯನ್ನು ಪಡೆಯಲಿದೆ. ಒಟ್ಟಿನಲ್ಲಿ ಬ್ಯಾಂಕುಗಳ ವಿಲೀನೀಕರಣದಿಂದಾಗಿ ದೇಶದ ಆರ್ಥಿಕತೆ ಗಂಭೀರ ಸ್ವರೂಪ ಪಡೆಯಲಿದ್ದು,ದೇಶದ ಕಾರ್ಮಿಕ ವರ್ಗ,ರೈತಾಪಿ ಜನತೆ,ಯುವಜನ ವರ್ಗ ಮುಂದಿನ ದಿನಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಲಿದೆ ಎಂದು 4 ಸಂಘಟನೆಗಳು ಆತಂಕ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಸೆ.3ರಂದು ಸಂಜೆ 5 ಗಂಟೆಗೆ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯೆದುರು ಆಯೋಜಿಸಲಾದ ಪ್ರತಿಭಟನೆಯಲ್ಲಿ ರೈತ ಕಾರ್ಮಿಕರು, ಯುವಜನರು,ಬ್ಯಾಂಕ್ ನೌಕರರು ಹಾಗೂ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಿಐಟಿಯುನ ಮುಖಂಡರಾದ ಜೆ.ಬಾಲಕ್ರಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಬಿಇಎಫ್ ಐನ ಮುಖಂಡರಾದ ಪುರುಷೋತ್ತಮ ಪೂಜಾರಿ, ಸುನಿಲ್ ರಾಜ್, ಡಿವೈಎಫ್ ಐನ ಮುಖಂಡ ರಾದ ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್, ಎಐಕೆಎಸ್ ನ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಕೆ.ಯಾದವ ಶೆಟ್ಟಿ ಯವರು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News