ಅಡಕತ್ತರಿಯಲ್ಲಿ 750 ಕೋ. ರೂ.ಮೋತ್ತದ ಬಂಗಲೆ ಖರೀದಿ: ಅಧಿಕಾರಿಗಳನ್ನು ದೂರಿದ ಪೂನಾವಾಲ
ಮುಂಬೈ,ಸೆ.1: ದಕ್ಷಿಣ ಮುಂಬೈಯಲ್ಲಿರುವ ವೈಭವೋಪೇತ ಲಿಂಕನ್ ಹೌಸನ್ನು 750 ಕೋಟಿ ರೂ.ಗೆ ಖರೀದಿಸಿ ಆ ಪಾರಂಪರಿಕ ಬಂಗಲೆಯನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವ ತನ್ನ ಪರಿವಾರದ ಕನಸು ಅಧಿಕಾರಿಗಳ ಕಿರುಕುಳದ ಪರಿಣಾಮವಾಗಿ ಅಡಕತ್ತರಿಯಲ್ಲಿ ಸಿಲುಕಿದೆ ಎಂದು ಉದ್ಯಮಿ ಅದರ್ ಪೂನಾವಾಲ ಆರೋಪಿಸಿದ್ದಾರೆ.
ಪುಣೆ ಮೂಲದ ಲಸಿಕೆ ತಯಾರಿಕಾ ಕಂಪೆನಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲಕರಾದ ಕೋಟ್ಯಧಿಪತಿ ಪೂನಾವಾಲ ಕುಟುಂಬ 2015ರಲ್ಲಿ 750 ಕೋಟಿ ರೂ. ಬಿಡ್ ಮೂಲಕ ಈ ಪಾರಂಪರಿಕ ಐಷಾರಾಮಿ ಬಂಗಲೆಯನ್ನು ಖರೀದಿಸಿತ್ತು. ಇದು ದೇಶದಲ್ಲಿ ಅತ್ಯಂತ ದುಬಾರಿ ಆಸ್ತಿ ವ್ಯವಹಾರವಾಗಿದೆ. ಆದರೆ ಈ ಮೊತ್ತದ ಬಹುತೇಕ ಪಾವತಿಸಿದರೂ ನಾಲ್ಕು ವರ್ಷಗಳ ನಂತರವೂ ಈ ಬಂಗಲೆಯನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಪೂನಾವಾಲ ತಿಳಿಸಿದ್ದಾರೆ. ಇದಕ್ಕೆ ಅವರು ಭಾರತೀಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ.
ಒಂದೊಮ್ಮೆ ವಾಂಕನೇರ್‌ನ ಮಹಾರಾಜನ ಸಂಪತ್ತಿನ ಭಾಗವಾಗಿದ್ದ ಈ ಎರಡು ಎಕರೆ ಆಸ್ತಿ ಸದ್ಯ ರಕ್ಷಣಾ ವಿಭಾಗದ ಸ್ವಾಧೀನದಲ್ಲಿರುವ ಈ ಜಮೀನಿನಲ್ಲಿ 1957ರಿಂದ ಅಮೆರಿಕ ಸರಕಾರ ತನ್ನ ರಾಯಭಾರ ಕಚೇರಿ ನಿರ್ಮಿಸಿತ್ತು. ನಂತರ ಈ ಕಚೇರಿಯನ್ನು ಬಾಂಡ್ರ-ಕುರ್ಲ ಕಾಂಪ್ಲೆಕ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಅಮೆರಿಕ ಜೊತೆ ವ್ಯವಹಾರ ಕುದುರಿಸಿದ್ದ ಪೂನಾವಾಲ ಕುಟುಂಬ ಈ ಜಮೀನಿನ ಲೀಸ್ ಹಕ್ಕನ್ನು ಪಡೆದುಕೊಂಡಿತ್ತು.
“ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂನಾವಾಲ, ಇಷ್ಟೊಂದು ಸಮಸ್ಯೆಯಾಗುತ್ತದೆ ಎಂದು ಮೊದಲೇ ತಿಳಿದಿದ್ದರೆ ನಾನು ಈ ಆಸ್ತಿಯನ್ನು ಮುಟ್ಟುತ್ತಲೇ ಇರಲಿಲ್ಲ. 1957ರಲ್ಲಿ ಆರಂಭವಾಗಿ ಒಟ್ಟು 999 ವರ್ಷಗಳ ಲೀಸನ್ನು ಮಾಡಲಾಗಿತ್ತು. ನಮ್ಮ ಬಳಿ ಇನ್ನೂ 900 ವರ್ಷಗಳಿವೆ ಎಂದು” ತಿಳಿಸಿದ್ದಾರೆ.