×
Ad

‘ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ’ ಎಂದು ಪ್ರಜಾಪ್ರಭುತ್ವದ ಹಕ್ಕು ಕುರಿತ ಕಾರ್ಯಕ್ರಮಕ್ಕೆ ಅಡ್ಡಿ

Update: 2019-09-01 21:02 IST

ಹೊಸದಿಲ್ಲಿ, ಸೆ.1: ಹೊಸದಿಲ್ಲಿಯಲ್ಲಿ ಮಾನವ ಹಕ್ಕುಗಳ ಸಂಘಟನೆ ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳ ವಿಷಯದ ಬಗ್ಗೆ ಚರ್ಚೆ ನಡೆಸುವುದನ್ನು ಆಕ್ಷೇಪಿಸಿ, ಇದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ ಎಂಬ ಕಾರಣ ನೀಡಿ ತಂಡವೊಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ಕೇಂದ್ರ ದಿಲ್ಲಿಯ ಮಾಳವೀಯ ಸ್ಮೃತಿ ಭವನದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಯ ಉದ್ದೇಶದ ಎರಡು ದಿನದ ರಾಷ್ಟ್ರೀಯ ಸಮಾವೇಶಕ್ಕೆ ಶನಿವಾರ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಅನುಮತಿ ನೀಡಿದ್ದ ಅಧಿಕಾರಿಗಳು ಬಳಿಕ ಸಮಾವೇಶದಲ್ಲಿ ನಿಗದಿಗೊಳಿಸಿದ್ದ ಗೋಷ್ಟಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಭಿನ್ನಾಭಿಪ್ರಾಯದ ದಮನ, ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರದ ರದ್ದತಿ, ದಲಿತರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳು ಇತ್ಯಾದಿ ವಿಷಯಗಳ ಗೋಷ್ಟಿಯನ್ನು ಆಯೋಜಿಸಿರುವುದಕ್ಕೆ ಆಕ್ಷೇಪ ಎತ್ತಿದರು ಹಾಗೂ ಈ ಕಾರ್ಯಕ್ರಮ ರದ್ದುಗೊಳಿಸಬೇಕೆಂಬ ಒತ್ತಡ ಬಂದಿದೆ ಎಂದು ಆಡಳಿತ ವರ್ಗ ತಿಳಿಸಿತು.

ಮುಖ್ಯವಾಗಿ ಪ್ರಜಾಪ್ರಭುತ್ವ ಹಕ್ಕು ವಿಷಯದ ಚರ್ಚೆಗೆ ಅವರು ಆಕ್ಷೇಪಿಸಿದರು ಎಂದು ಸಿಪಿಐ(ಮಾರ್ಕಿಸ್ಟ್-ಲೆನಿನಿಸ್ಟ್) ಪಾಲಿಟ್‌ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸಮಾವೇಶದ ಆಯೋಜಕರು ಸಂಘಟನೆಯ ಸಿದ್ಧಾಂತ ಹಾಗೂ ಚಿಂತನೆಯ ಬಗ್ಗೆ ಮೊದಲೇ ತಿಳಿಸದೆ ತಪ್ಪು ಮಾಹಿತಿ ನೀಡಿದ ಕಾರಣ ಸಮಾವೇಶವನ್ನು ರದ್ದುಗೊಳಿಸಿರುವುದಾಗಿ ರವಿವಾರ ಮಧ್ಯಾಹ್ನ ತಿಳಿಸಲಾಗಿದೆ. ದಿಲ್ಲಿಯಲ್ಲಿ ಮಾನವ ಹಕ್ಕುಗಳ ಕುರಿತಾದ ಪ್ರಮುಖ ಸಮಾವೇಶವನ್ನು ಯಾವುದೇ ಅಡ್ಡಿಯಿಲ್ಲದೆ ನಡೆಸಲು ಸಾಧ್ಯವಾಗಿಲ್ಲ ಎಂಬುದು ಬೇಸರದ ವಿಷಯ ಎಂದವರು ಹೇಳಿದ್ದಾರೆ.

ಸಮಾವೇಶವು ಮಾನವ ಹಕ್ಕುಗಳ ಕುರಿತಾಗಿದೆ ಎಂದು ಮೊದಲೇ ಸ್ಪಷ್ಟವಾಗಿ ತಿಳಿಸಿರುವುದಾಗಿ ಸಮಾವೇಶದ ಸಹ ಆಯೋಜಕರಾದ ‘ಪಾಕಿಸ್ತಾನ-ಇಂಡಿಯಾ ಪೀಪಲ್ಸ್ ಫೋರಂ ಫಾರ್ ಪೀಸ್ ಆ್ಯಂಡ್ ಡೆಮಾಕ್ರಸಿ’ಯ ಪ್ರಧಾನ ಕಾರ್ಯದರ್ಶಿ ವಿಜಯನ್ ಎಂಜೆ ಹೇಳಿದ್ದಾರೆ. ಆದರೆ ಶನಿವಾರ ಉಪನ್ಯಾಸ ನೀಡಿದವರು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವ ಬಗ್ಗೆ ಮಾತನಾಡಿದ್ದಾರೆ. ಇದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಆ ಬಳಿಕ ಸಮಾವೇಶದ ಸ್ಥಳಕ್ಕೆ ಆಗಮಿಸಿದ ತಂಡವೊಂದು ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದೆ. ಇವರಲ್ಲಿ ಕೆಲವರು ಮಾಳವೀಯ ಟ್ರಸ್ಟ್‌ನ ಸದಸ್ಯರು ಹಾಗೂ ಉಳಿದವರು ಆರೆಸ್ಸೆಸ್ ಸಂಘಟನೆಯವರು. ಜೆಎನ್‌ಯುವಿನ ಎಬಿವಿಪಿ ಸದಸ್ಯರೂ ಗುಂಪಿನಲ್ಲಿದ್ದು ಇವರ ಮುಖ ನೋಡಿದರೆ ಗುರುತಿಸಬಲ್ಲೆ ಎಂದು ವಿಜಯನ್ ಹೇಳಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಿದ್ದು ಸಮಾವೇಶ ಯಶಸ್ವಿಯಾಗಿ ನಡೆದಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News