ಮೋದಿಯ ಉತ್ತಮ ಸಾಧನೆ ಹುಡುಕುವುದೆಂದರೆ ಹುಲ್ಲಿನ ಮಧ್ಯೆ ಸೂಜಿ ಹುಡುಕಿದಂತೆ: ಖುರ್ಷಿದ್
ಹೊಸದಿಲ್ಲಿ,ಸೆ.1: ಪ್ರಧಾನಿ ಮೋದಿ ಮಾಡಿರುವ ಉತ್ತಮ ಕೆಲಸಗಳನ್ನು ಹುಡುಕುವುದು ಹುಲ್ಲಿನ ರಾಶಿಯಲ್ಲಿ ಸೂಜಿ ಹುಡುಕುವುದಕ್ಕೆ ಸಮ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ರವಿವಾರ ತಿಳಿಸಿದ್ದಾರೆ.
ಮೋದಿ ಯಾವುದಾದರೂ ಉತ್ತಮ ಕಾರ್ಯ ಮಾಡಿದರೆ ಅದನ್ನು ಹೊಗಳಬೇಕು ಎಂದು ಕೆಲದಿನಗಳ ಹಿಂದೆ ಕಾಂಗ್ರೆಸ್‌ನ ಕೆಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಖುರ್ಷಿದ್ ಈ ಹೇಳಿಕೆ ನೀಡಿದ್ದಾರೆ. ಸದ್ಯ ದೇಶ ಮುಂದೆ ಸಾಗುತ್ತಿರುವ ರೀತಿಯ ಬಗ್ಗೆಯೂ ಕಾಂಗ್ರೆಸ್‌ಗೆ ಬಹಳ ಆತಂಕವಿದೆ ಎಂದು ಖುರ್ಷಿದ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಆಡಳಿತ ಸಂಪೂರ್ಣ ಕೆಟ್ಟ ಕತೆಯೇನೂ ಅಲ್ಲ ಮತ್ತು ಅವರ ಉತ್ತಮ ಕೆಲಸಗಳನ್ನು ಗುರುತಿಸದಿರುವುದು ಮತ್ತು ಪ್ರತಿಬಾರಿ ಅವರನ್ನು ದುಷ್ಟನಂತೆ ಬಿಂಬಿಸುವುದರಿಂದ ಏನೂ ಫಲವಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರಾದ ಜೈರಾಮ್ ರಮೇಶ್ ಕೆಲದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಜೈರಾಮ್ ರಮೇಶ್ ಅವರ ಹೇಳಿಕೆಯನ್ನು ಕಾಂಗ್ರೆಸಿಗರಾದ ಶಶಿ ತರೂರ್ ಮತ್ತು ಅಭಿಷೇಕ್ ಮನು ಸಿಂಘ್ವಿಯೂ ಬೆಂಬಲಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಖುರ್ಷಿದ್, “ಅವರಿಗೆ ಏನು ಹೇಳಬೇಕೆಂದು ಅನಿಸಿತೋ ಅದನ್ನು ಅವರು ಹೇಳಿದ್ದಾರೆ. ಎಲ್ಲರೂ ಅವರಿಗೆ ಸೂಕ್ತವಾದ ರೀತಿಯಲ್ಲಿ ವಿಷಯವನ್ನು ವಿವರಿಸುತ್ತಾರೆ. ನಾನು ಈಗಲೇ ತಿಳಿಸಿರುವಂತೆ, ನನ್ನ ಪ್ರಕಾರ ಮೋದಿಯವರ ಉತ್ತಮ ಕಾರ್ಯಗಳಿಗೆ ಹುಡುಕುವುದೆಂದರೆ ಹುಲ್ಲಿನ ರಾಶಿಯಲ್ಲಿ ಸೂಜಿಯನ್ನು ಹುಡುಕಿದಂತೆ” ಎಂದು ತಿಳಿಸಿದ್ದಾರೆ. ಪಕ್ಷವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಗಾಂಧಿ ಪರಿವಾರದ ಪಾತ್ರದ ಬಗ್ಗೆ ಕೇಳಿದಾಗ, ಗಾಂಧಿ ಕುಟುಂಬ ಕಾಂಗ್ರೆಸ್ ಪಕ್ಷದ ಬುನಾದಿ ಎನ್ನುವುದು ವಾಸ್ತವ ಎಂದು ಖುರ್ಷಿದ್ ತಿಳಿಸಿದ್ದಾರೆ.