×
Ad

ಮೊಯ್ಲಿ ವಿವಾದಿತ ಹೇಳಿಕೆ ಆರೋಪ: ಹರ್ಷ ಮೊಯ್ಲಿ-ಪದಾಧಿಕಾರಿ ನಡುವೆ ಮಾತಿನ ಚಕಮಕಿ

Update: 2019-09-01 21:23 IST
ಹರ್ಷ ಮೊಯ್ಲಿ

ಉಡುಪಿ, ಸೆ.1: ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ಶನಿವಾರ ಉಡುಪಿಗೆ ಆಗಮಿಸಿ ಕಾಂಗ್ರೆಸ್ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಈಗ ಕಾಂಗ್ರೆಸ್ ಪಕ್ಷದಲ್ಲಿಲ್ಲ ಎಂದು ನೀಡಿದ ಹೇಳಿಕೆ ಈಗ ವಿವಾದದ ಅಲೆಯನ್ನೇ ಎಬ್ಬಿಸಿದೆ.

ನಿನ್ನೆ ಪತ್ರಿಕಾಗೋಷ್ಠಿ ವೇಳೆ ಉಪಸ್ಥಿತರಿದ್ದ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಹಾಗೂ ಡಿಸಿಸಿಯ ಉಪಾಧ್ಯಕ್ಷರ ನಡುವೆ ದೂರವಾಣಿಯಲ್ಲಿ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.

ಮೊಯ್ಲಿ ಅವರು ನೀಡಿದ ಹೇಳಿಕೆಯ ಕುರಿತಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಅಮೀನ್, ಹರ್ಷ ಮೊಯ್ಲಿ ಅವರಿಗೆ ದೂರವಾಣಿ ಕರೆ ಮಾಡಿ, ಪ್ರಮೋದ್ ಕಾಂಗ್ರೆಸ್‌ನಲ್ಲಿಲ್ಲ, ಜೆಡಿಎಸ್‌ನಲ್ಲಿದ್ದಾರೆ ಎಂದೆಲ್ಲಾ ಹೇಳಿದ್ದನ್ನು ಪ್ರಶ್ನಿಸಿದ್ದು, ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದದ ಆಡಿಯೋ ಈಗ ಕರಾವಳಿಯಲ್ಲಿ ವೈರಲ್ ಆಗಿದೆ.

ನೀವೇನೂ ಉಡುಪಿ ಕಾಂಗ್ರೆಸ್‌ನ ಪದಾಧಿಕಾರಿಯಲ್ಲ. ಹೀಗಾಗಿ ಪ್ರಮೋದ್ ಅವರ ಸುದ್ದಿಗೆ ಬರಬೇಡಿ ಎಂದು ತುಳುವಿನಲ್ಲಿ ನಡೆದ ಸಂಭಾಷಣೆ ವೇಳೆ ಅಮೀನ್, ಮೊಯ್ಲಿ ಪುತ್ರನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಸಿಟ್ಟಾದ ಹರ್ಷ, ನೀವು ಬಾಯಿ ಮುಚ್ಚಿ ಎಂದು ಅಬ್ಬರಿಸಿದ್ದಾರೆ. ನಾನು ಬಾಯಿ ಮುಚ್ಚುವಂತೆ ನೀವು ನನಗೆ ಹೇಳಬೇಕಾದ ಅಗತ್ಯವಿಲ್ಲ ಎಂದು ಅಮೀನ್ ಅಷ್ಟೇ ಜೋರಾಗಿ ನುಡಿದಿದ್ದಾರೆ.

ಮತ್ತೆ ಅರ್ಜಿ ಹಾಕಲು ಸಿದ್ಧ: ಈ ನಡುವೆ ಕಳೆದ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಸ್ಪರ್ಧಿಸಿತ್ತು. ಕಾಂಗ್ರೆಸ್ ಪಕ್ಷದ ಆದೇಶದಂತೆ ನಾವು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‌ಗೆ ಬೆಂಬಲ ನೀಡಿ ಆ ಪಕ್ಷದ ಪರವಾಗಿ ಮತಯಾಚನೆ ಮಾಡಿದ್ದೇವೆ ಎಂದು ಎಂದು ಜಿಲ್ಲಾ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್ ನೇತೃತ್ವದಲ್ಲಿ ಹಿರಿಯ ಕಾರ್ಯಕರ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಪಕ್ಷದ ನಿರ್ದೇಶನದಂತೆ ಜೆಡಿಎಸ್‌ಗೆ ಬೆಂಬಲ ನೀಡಿ ಅದಕ್ಕೆ ಮತ ನೀಡಿದ ಕಾಂಗ್ರೆಸ್‌ನ ಕಾರ್ಯಕರ್ತರೆಲ್ಲ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯುವುದು ಕಡ್ಡಾಯವಾದರೆ ಕಾರ್ಯಕರ್ತರೆಲ್ಲ ಸಾಮೂಹಿಕವಾಗಿ ಸದಸ್ಯತ್ವ ಪಡೆಯಲು ಸಿದ್ಧರಿದ್ದೇವೆ ಎಂದು ಮಾಜಿ ಜಿಪಂ ಸದಸ್ಯ ದಿವಾಕರ ಕುಂದರ್, ಮಾಜಿ ನಗರಸಭಾ ಸದಸ್ಯ ಸುಖೇಶ್ ಕುಂದರ್, ನಾರಾಯಣ ಕುಂದರ್ ತಿಳಿಸಿದ್ದಾರೆ.

ಇದೇ ರೀತಿಯ ಹೇಳಿಕೆಯನ್ನು ಹಾಲಿ ಉಡುಪಿ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಪೂಜಾರಿ ಬೈಲೂರು, ಅಮೃತ ಕೃಷ್ಣಮೂರ್ತಿ ಹಾಗೂ ಸಲಿನಾ ಕರ್ಕಡ ಅವರೂ ನೀಡಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರಲ್ಲಿ ಈ ಕುರಿತು ಯಾವುದೇ ರೀತಿಯ ಗೊಂದಲ ಇಲ್ಲ ಹಾಗೂ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಅರ್ಜಿ ಹಾಕಿಲ್ಲ ಎಂಬ ಗೊಂದಲದ ಹೇಳಿಕೆಯಲ್ಲಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News