ಅಂಗದಾನ ಜೀವನದ ಬಹುದೊಡ್ಡ ನಿರ್ಧಾರ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್
ಮಣಿಪಾಲ ಸೆ.1: ಈಗ ಎಲ್ಲ ಕಡೆ ಅಂಗದಾನಿಗಳ ಕೊರತೆ ಇದೆ. ಇದಕ್ಕೆ ಅಂಗದಾನದ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲದಿರುವುದೇ ಮುಖ್ಯ ಕಾರಣ. ಅಂಗದಾನ ಮಾಡಲು ನಿರ್ಧರಿಸುವ ಮತ್ತು ಬೇರೆಯವರಿಗೆ ಜೀವದಾನ ನೀಡುವ ಸಂದರ್ಭ ಬಹು ಸೂಕ್ಷ್ಮ ಮತ್ತು ದೊಡ್ಡ ತೀರ್ಮಾನವಾ ಗಿರುತ್ತದೆ. ಅಂಗದಾನಿಗಳ ನಿರ್ಧಾರಕ್ಕೆ ಸಮಾಜ ಮುಕ್ತ ಕಂಠದ ಶ್ಲಾಘನೆ ಸಿಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ಡಾ.ಟಿಎಂಎ ಪೈ ಸಭಾಂಗಣ ದಲ್ಲಿ ಶನಿವಾರ ನಡೆದ ಅಂಗಾಂಗ ದಾನ ದಿನಾಚರಣೆ ಹಾಗೂ ಅಂಗಾಂಗ ದಾನಿಗಳ 30 ಕುಟುಂಬಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. ಇದೇ ಸಂದರ್ಭದಲ್ಲಿ ಅವರು ತನ್ನ ಕಣ್ಣನ್ನು ದಾನ ಮಾಡುವ ನಿರ್ಧಾರ ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹ ಕುಲಪತಿ ಡಾ.ಪೂರ್ಣಿಮಾ ಬಾಳಿಗಾ ಮಾತನಾಡಿ, ಅಂಗದಾನ ಒಂದು ದಿಟ್ಟವಾದ ನಿರ್ಧಾರವಾದರೂ, ಕುಟುಂಬ ದವರಿಗೆ ಅದು ಸುಲಭವಲ್ಲ. ಏಕೆಂದರೆ ಕೆಲವು ಮೂಢನಂಬಿಕೆ ಮತ್ತು ಸಾಂಪ್ರದಾಯಿಕ ಆಚರಣೆ ಗಳು ಅಡ್ಡಿಯಾಗುತ್ತವೆ. ಇವನ್ನೆಲ್ಲಾ ಮೆಟ್ಟಿ ನಿಂತು ಅಂಗದಾನ ಮಾಡುವ ಕುಟುಂಬದ ತೀರ್ಮಾನ ನಿಜಕ್ಕೂ ಆದರ್ಶಪ್ರಾಯ ಹಾಗೂ ಇತರರಿಗೆ ಅಂಗದಾನ ಮಾಡಲು ಪ್ರೇರೇಪಣೆ ಎಂದು ತಿಳಿಸಿದರು.
ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಂಗಾಂಗ ಕಸಿ ಬಗ್ಗೆ ಜಾಗೃತಿ ಬಹಳ ಕಡಿಮೆ. ವರದಿಯ ಪ್ರಕಾರ, ಅಂಗಾಂಗ ವೈಫಲ್ಯದಿಂದ ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಸಾಯುತ್ತಿದ್ದಾರೆ. ಅಂಗಾಂಗ ಕಸಿ ವ್ಯಕ್ತಿಯ ಗುಣಮಟ್ಟದ ಜೀವನವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
ಕೆಎಂಸಿಯ ಸಹ ಡೀನ್ ಡಾ.ಚಿರಂಜಯ್ ಮುಖೋಪಾಧ್ಯಾಯ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ, ಉಪವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ ಹೆಗ್ಡೆ ಮತ್ತು ಇತರರು ಉಪಸ್ಥಿತರಿದ್ದರು.
ಮೂತ್ರಪಿಂಡಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಂಕರಪ್ರಸಾದ, ನರ ಶಸ್ತ್ರಚಿಕಿತ್ಸೆಯ ಸಹ ಪ್ರಾಧ್ಯಾಪಕ ಡಾ. ಲಕ್ಷ್ಮಿಪ್ರಸಾದ, ನೇತ್ರ ವಿಜ್ಞಾನದ ಪಾರಪಟಲ (ಕಾರ್ನಿಯಾ) ಕಸಿ ವಿಭಾಗದ ತಜ್ಞೆ ಡಾ.ಮನಾಲಿ ಹಝಾರಿಕಾ ಅವರು ಕ್ರಮವಾಗಿ ನೇರ ಮೂತ್ರಪಿಂಡ ದಾನ, ಕ್ಯಾಡವೆರಿಕ್ ಅಂಗದಾನ ಮತ್ತು ಕಣಿ್ಣನ ದಾನದ ಬಗ್ಗೆ ಮಾಹಿತಿ ನೀಡಿದರು.
ಡಾ.ಅವಿನಾಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ್ ಹೆಗ್ಡೆ ವಂದಿಸಿದರು. ಮಾನವ ಸಂಪನ್ಮೂಲ ವಿಭಾಗದ ಸುಚೇತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.