ಪ್ರಮೋದ್ ಕುರಿತು ಮೊಯ್ಲಿ ಹೇಳಿಕೆಗೆ ಖಂಡನೆ

Update: 2019-09-01 16:16 GMT

ಉಡುಪಿ, ಸೆ.1: ಪ್ರಮೋದ್ ಮಧ್ವರಾಜ್ ಈಗ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಅವರು ಮತ್ತೆ ಕಾಂಗ್ರೆಸ್‌ಗೆ ಬರಬೇಕಾದರೆ ಅರ್ಜಿ ಸಲ್ಲಿಸಬೇಕು ಎಂಬ ಪಕ್ಷದ ವರಿಷ್ಠ ವೀರಪ್ಪ ಮೊಯ್ಲಿ ಅವರ ಹೇಳಿಕೆಯನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮದಂತೆ ಉಡುಪಿ ಚಿಕ್ಕ ಮಗಳೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟ ಹಿನ್ನೆಲೆಯಲ್ಲಿ ಪ್ರಮೋದ್ ಮಧ್ವರಾಜ್ ಪಕ್ಷದ ವರಿಷ್ಠರ ಅನುಮತಿ ಮೇರೆಗೆ ಜೆಡಿಎಸ್ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿದ್ದರು. ಪಕ್ಷದ ಆದೇಶದಂತೆ ಚುನಾವಣೆಯಲ್ಲಿ ಶ್ರಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಹೊಸ ಅರ್ಜಿ ಸಲ್ಲಿಸಬೇಕೆ ಎಂಬುದನ್ನು ಕೂಡ ಮೊಯ್ಲಿ ತಿಳಿಸಲಿ ಎಂದು ಸಮಿತಿ ಟೀಕಿಸಿದೆ.

ಪ್ರಮೋದ್ ಮಧ್ವರಾಜ್ ಯಾವುದೇ ಸಂದರ್ಭದಲ್ಲೂ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಯಾವುದೇ ಪಕ್ಷಕ್ಕೆ ಅವರು ಸೇರಿಲ್ಲ. ಆದುದರಿಂದ ಪಕ್ಷದ ಸಕ್ರೀಯ ಸದಸ್ಯರಾಗಿರುವ ಅವರು ಎಂದೆಂದಿಗೂ ಕಾಂಗ್ರೆಸಿಗ ಎಂದು ಸಮಿತಿ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಪ್ರಧಾನ ಕಾರ್ಯದರ್ಶಿ ಕೆ.ಜನಾರ್ದನ ಭಂಡಾರ್ಕರ್, ಗಣೇಶ್ ನೆರ್ಗಿ, ಚಂದ್ರಿಕಾ ಶೆಟ್ಟಿ, ಪ್ರಶಾಂತ್ ಪೂಜಾರಿ, ನವೀನ್ ಶೆಟ್ಟಿ, ರಫೀಕ್ ದೊಡ್ಡಣಗುಡ್ಡೆ, ಪೃಥ್ವಿರಾಜ್ ಶೆಟ್ಟಿ, ಅನಂತ್ ನಾಯ್ಕಿ, ಸದಾಶಿವ, ರಮೇಶ್ ಕಾಂಚನ್, ಶಶಿರಾಜ್ ಕುಂದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದಸ್ಯತ್ವ ಪಡೆಯಲು ಸಿದ್ಧ

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಿ, ಅದಕ್ಕೆ ಮತ ನೀಡಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೆಲ್ಲ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ಸದಸ್ಯತನ ಪಡೆಯುವುದು ಕಡ್ಡಾಯ ವಾದರೆ ಕಾರ್ಯಕರ್ತರೆಲ್ಲ ಸಾಮೂಹಿಕವಾಗಿ ಕಾಂಗ್ರೆಸ್ ಸದಸ್ಯತನ ಪಡೆಯಲು ಸಿದ್ದರಾಗಿದ್ದೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ದಿನೇಶ್ ಪುತ್ರನ್, ಜಿಪಂ ಮಾಜಿ ಸದಸ್ಯ ದಿವಾಕರ ಕುಂದರ್, ನಗರಸಭಾ ಮಾಜಿ ಸದಸ್ಯರಾದ ಸುಖೇಶ್ ಕುಂದರ್, ನಾರಾಯಣ ಕುಂದರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News