ಗಣೇಶ ಚತುರ್ಥಿ: ಉಡುಪಿ ಜಿಲ್ಲೆಯಾದ್ಯಂತ ಬಿಗಿ ಭದ್ರತೆ

Update: 2019-09-01 16:19 GMT

ಉಡುಪಿ, ಸೆ.1: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ವ್ಯಾಪಕ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 453 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ 3 ಡಿವೈಎಸ್ಪಿ, 9 ಪೊಲೀಸ್ ನಿರೀಕ್ಷಕರು, 23 ಪೊಲೀಸ್ ಉಪನಿರೀಕ್ಷಕರು, 51 ಸಹಾಯಕ ಪೊಲೀಸ್ ಉಪನಿರೀಕ್ಷಕರು, 320 ಪೊಲೀಸ್ ಸಿಬ್ಬಂದಿ ಜೊತೆಗೆ ಪ್ರತಿ ಪೊಲೀಸ್ ಉಪ ವಿಭಾಗಕ್ಕೆ ತಲಾ 100ರಂತೆ ಒಟ್ಟು 300 ಗೃಹರಕ್ಷಕ ದಳ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ.

7 ಡಿಎಆರ್ ತುಕಡಿ ಹಾಗೂ 3 ಕೆಎಸ್‌ಆರ್‌ಪಿ ತುಕಡಿಗಳನ್ನು ಬಳಸಿ ಕೊಳ್ಳಲಾಗಿದೆ. ಹೊಯ್ಸಳ ಹಾಗೂ ಮೋಟಾರು ಸೈಕಲ್ ಪೆಟ್ರೋಲ್ ವ್ಯವಸ್ಥೆ ಯನ್ನು ಎಲ್ಲಾ ಠಾಣಾ ಮಟ್ಟದಲ್ಲಿ ಜಾರಿಗೊಳಿಸಲಾಗಿದೆ. ಪ್ರಮುಖ ಆಯ ಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿ ಯವರನ್ನು ನಿಯೋಜಿಸಲಾಗಿದೆ. ಅಂತರ್‌ಜಿಲ್ಲಾ ಗಡಿಪ್ರದೇಶದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಆಯ್ದ ಸ್ಥಳಗಳ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ವೀಡಿಯೋಗ್ರಪಿ ನಡೆಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಸಾಮಾಜಿಕ ಜಾಲತಾಣಗಳ ಬಗ್ಗೆ ನಿಗಾ

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರಚೋದನಕಾರಿ/ ಅವಹೇಳನ ಕಾರಿ ವಿಷಯಗಳು, ಚಿತ್ರಗಳು ಹರಿದಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸಾಮಾಜಿಕ ಜಾಲತಾಣಗಳ ಬಗ್ಗೆ ಇಲಾಖೆಯು ನಿಗಾ ಇಟ್ಟಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಎಲ್ಲಾ ಧರ್ಮದ ಮುಖಂಡರನ್ನು ಕರೆಯಿಸಿ ಶಾಂತಿ ಸಭೆಯನ್ನು ಪೊಲೀಸ್ ಠಾಣಾ ಮಟ್ಟ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಮಟ್ಟದಲ್ಲಿ ನಡೆಸಿದ್ದು, ಗಣೇಶೋತ್ಸವ ಸಮಯದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News