ಬಜ್ಪೆ ಯುವತಿಗೆ ವರದಕ್ಷಿಣೆ ಕಿರುಕುಳ ಆರೋಪ : ಪ್ರಕರಣ ದಾಖಲು

Update: 2019-09-02 08:40 GMT

ಮಂಗಳೂರು, ಸೆ. 2: ನಗರದ ಹೊರವಲಯ ಬಜ್ಪೆಯ ಯುವತಿಗೆ ಪತಿಯ ಕುಟುಂಬಸ್ಥರು ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜ್ಪೆ ನಿವಾಸಿ ಅರ್ಸಿಯಾ ಕೌಸರ್ ಅವರಿಗೆ ಪತಿ ಮುಹಮ್ಮದ್ ಮುಸ್ತಾಕ್, ಅತ್ತೆ ನೂರ್‌ಜಹಾನ್, ನಾದಿನಿಯರಾದ ಮುಮ್ತಾಝ್, ಮುನೀಸಾ, ನಾದಿನಿಯ ಪತಿ ಆಸಿಫ್ ಕಿರುಕುಳ ನೀಡಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ

‘ಹಳೆಯಂಗಡಿ ಕದಿಕೆ ಗ್ರಾಮದ  ಅರ್ಸಿಯಾ ಕೌಸರ್ ರನ್ನು 2013ರಲ್ಲಿ ಬಜ್ಪೆಯ ಮುಹಮ್ಮದ್ ಮುಸ್ತಾಕ್‌ಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದರು. ಮದುವೆ ಸಮಯದಲ್ಲಿ ಆರೋಪಿಗಳು ಬೇಡಿಕೆಯಿಟ್ಟಿದ್ದ ಎರಡು ಲಕ್ಷ ರೂ. ನಗದು ಹಾಗೂ 85 ಪವನ್ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದರು. ಮದುವೆಯ ನಂತರೂ ಯುವತಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಅಲ್ಲದೆ, ಆರೋಪಿ ಮುಹಮ್ಮದ್ ಮುಸ್ತಾಕ್ ತನ್ನ ಸಹೋದರಿ ಮುನೀಸಾಳ ಮದುವೆ ವೇಳೆ ಯುವತಿಯನ್ನು ಮತ್ತೆ ತವರು ಮನೆಗೆ ಕಳುಹಿಸಿ ಎರಡು ಲಕ್ಷ ರೂ. ವರದಕ್ಷಿಣೆ ಪಡೆದ ಬಳಿಕವೂ ಕಿರುಕುಳ ಮುಂದುವರಿಸಿದ್ದರು. ಯುವತಿಯನ್ನು ವಿದೇಶಕ್ಕೆ ಕರೆದೊಯ್ದ ಆರೋಪಿಗಳು ಅಲ್ಲಿಯೂ ಆಕೆಗೆ ಕಿರುಕುಳ ನೀಡಿದ್ದಾರೆ. ಸ್ವದೇಶಕ್ಕೆ ಮರಳಿದ ನಂತರವೂ ಗಂಡನ ಮನೆಯ ಸದಸ್ಯರು ಹಿಂಸೆಯ ಜತೆಗೆ ಸರಣಿ ಕಿರುಕುಳ ನೀಡುವುದನ್ನು ಮುಂದುವರಿಸಿದ್ದರು’ ಎಂದು ದೂರಿನಲ್ಲಿ ವಿವರಿಸಲಾಗಿದೆ.

‘2019ರ ಜುಲೈ 25ರಂದು ಯುವತಿಯನ್ನು ತವರುಮನೆಯಿಂದ ಕರೆಸಿಕೊಂಡ ಅತ್ತೆ ನೂರ್‌ಜಹಾನ್, ಯುವತಿಯ ತಾಯಿಯ ಎದುರಿನಲ್ಲೇ ಹಲ್ಲೆ ನಡೆಸಿದ್ದಾರೆ. ಮರುದಿನ (ಜು.26) ಬೆಳಗ್ಗೆ 9 ಗಂಟೆಗೆ ವಿದೇಶದಿಂದ ವಾಪಸಾದ ಆರೋಪಿ ಮುಹಮ್ಮದ್ ಮುಸ್ತಾಕ್ ಕೂಡ ಯುವತಿಗೆ ಹಲ್ಲೆ ನಡೆಸಿದ್ದಾನೆ. ವರದಕ್ಷಿಣೆ, ಹಲ್ಲೆಯ ವಿಷಯವನ್ನು ಯಾರಲ್ಲಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಐಪಿಸಿ ಸೆಕ್ಷನ್ 504(ನಿಂದನೆ), 323(ಮಾನಸಿಕ ಕಿರುಕುಳ), 506 (ಜೀವ ಬೆದರಿಕೆ), 34 (ಸಂಘಟಿತ ಕೃತ್ಯ) ಹಾಗೂ ವರದಕ್ಷಿಣೆ ಕಿರುಕುಳ ನಿಷೇಧ ಕಾಯ್ದೆಯಡಿಯಲ್ಲಿ ಆರೋಪಿಗಳ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News