‘ಸಾವನ್ ಭಡೋ’ ತಿಂಗಳಲ್ಲಿ ಅರ್ಥವ್ಯವಸ್ಥೆ ಕುಸಿತ ಸಾಮಾನ್ಯ ಎಂದ ಬಿಜೆಪಿ ನಾಯಕ ಸುಶೀಲ್ ಮೋದಿ

Update: 2019-09-02 10:44 GMT

ಪಾಟ್ನಾ, ಸೆ.2: ‘ಸಾವನ್ ಭಡೋ’ ತಿಂಗಳುಗಳಲ್ಲಿ ಸಾಮಾನ್ಯವಾಗಿರುವ ಅರ್ಥವ್ಯವಸ್ಥೆಯ ನಿಧಾನಗತಿಯ ವಿಚಾರವನ್ನೇ ಕೈಗೆತ್ತಿಕೊಂಡು ಕೆಲವು ವಿಪಕ್ಷಗಳು ಅನಗತ್ಯ ಭೀತಿಯ ವಾತಾವರಣ ಸೃಷ್ಟಿಸುತ್ತಿವೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

“ಹಿಂದು ಪಂಚಾಂಗದ ಐದನೇ ಮತ್ತು ಆರನೇ ತಿಂಗಳುಗಳಾದ `ಸಾವನ್ ಭಡೋ' ಸಂದರ್ಭ ಅರ್ಥವ್ಯವಸ್ಥೆ ಪ್ರತಿ ವರ್ಷ ನಿಧಾನಗತಿಯಲ್ಲಿರುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಚುನಾವಣೆಯಲ್ಲಿನ ಸೋಲಿನ ಹತಾಶೆಯನ್ನು ಹೊರಗೆಡಹಲು ಇದೇ ವಿಚಾರವನ್ನು ಕೈಗೆತ್ತಿಕೊಂಡು ಕೆಲವರು ಸದ್ದು ಮಾಡುತ್ತಿದ್ದಾರೆ” ಎಂದು ಸುಶೀಲ್ ಮೋದಿ ಟ್ವೀಟ್ ಮಾಡಿದ್ದಾರೆ.

ಅರ್ಥವ್ಯವಸ್ಥೆಯ ನಿಧಾನಗತಿ ವಿಚಾರದಲ್ಲಿ ಭಯ ಪಡುವ ಅಗತ್ಯವಿಲ್ಲ, ಅದನ್ನು ಪರಿಹರಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತಿದೆ, ಸದ್ಯವೇ ಮೂರನೇ ಪ್ಯಾಕೇಜ್ ಘೋಷಿಸಲಿದೆ ಎಂದರು.

``ಅರ್ಥವ್ಯವಸ್ಥೆಯ ನಿಧಾನಗತಿ ಬಿಹಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ರಾಜ್ಯದಲ್ಲಿ ವಾಹನ  ಮಾರಾಟ ಕೂಡ ಕುಂಠಿತಗೊಂಡಿಲ್ಲ'' ಎಂದು ಸುಶೀಲ್ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News