ದೇಶ ಸೇವೆಗೆ ಸಿಕ್ಕ ಸದಾವಕಾಶದ ಸದ್ಬಳಕೆಯ ತುಡಿತ: ಮುಷಾಹಿದ್ ಅಹ್ಮದ್

Update: 2019-09-02 11:24 GMT

ಭಟ್ಕಳ: ಇಲ್ಲಿನ ಹುರುಳೀಸಾಲ್ ನಿವಾಸಿ ಮುಷಾಹಿದ್ ಅಹ್ಮದ್ ಶೇಖ್ ಪಿಎಸ್‍ಐ ಸಿವಿಲ್ ಪರೀಕ್ಷೆ 2018 ರಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದು, ದೇಶಸೇವೆಗೆ ಸಿಕ್ಕ ಸದಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಪಿಎಸ್‍ಐ ಹುದ್ದೆ ಅಲಂಕರಿಸಲಿರುವ ನವಾಯತ್ ಸಮುದಾಯ ಪ್ರಥಮ ಯುವಕ ಎಂಬ ಹೆಗ್ಗಳಿಕೆ ಪಾತ್ರನಾಗಿರುವ ಮುಷಾಹಿದ್ ಆಹ್ಮದ್ ಪೊಲೀಸ್ ಸೇವೆಯ ತರಬೇತಿಗಾಗಿ ಮೈಸೂರಿಗೆ ಪ್ರಯಾಣಿಸಲಿದ್ದಾರೆ.

ಐದು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮೊಹಮ್ಮದ್ ಹನೀಫ್ ಶೇಖ್ ಅವರ ಪುತ್ರ ಮುಷಾಹಿದ್ ಅಹ್ಮದ್ ಬೆಂಗಳೂರಿನಿಂದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದ ನಂತರ 2017 ರಲ್ಲಿ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಂತಿಮ ಹಂತವನ್ನು ತಲುಪಿದ್ದರು.

ಇಲ್ಲಿನ ಪ್ರತಿಷ್ಟಿತ ಶಮ್ಸ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ, ನೌನಿಹಾಲ್ ಸೆಂಟ್ರಲ್ ಸ್ಕೂಲ್ ಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಪೂರೈಸಿದ ಇವರು ಆನಂದಾಶ್ರಮ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು ನಂತರ  ಬ್ಯಾಚುಲರ್ ಆಫ್ ಆರ್ಕಿಟೆಕ್ ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. 

ಜನರಲ್ ಮೆರಿಟ್ ಆಧಾರದ ಮೇಲೆ ಮುಷಾಹಿದ್ ಪಿಎಸ್ಐಸಿ ಸಿವಿಲ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ. ಮತ್ತು ಕರ್ನಾಟಕ ರಾಜ್ಯದಲ್ಲಿ ಇದು ಎರಡನೇ ಬಾರಿಗೆ ಜನರಲ್ ಮೆರಿಟ್ ಆಧಾರದ ಮೇಲೆ ಮುಸ್ಲಿಂ ವಿದ್ಯಾರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರ ಸಹೋದರ ಉರಗತಜ್ಞ  ಮಿಸ್ಬಾ ಉಲ್ ಹಖ್ ಮಾಹಿತಿ ನೀಡಿದ್ದಾರೆ.

2018 ರಲ್ಲಿ ಎಂಟು ಸ್ಥಾನಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿತ್ತು, ಆದರೆ ಮುಷಾಹಿದ್ ಉತ್ತಮ ಅಂಕಗಳೊಂದಿಗೆ ಜನರಲ್ ಮೆರಿಟ ಪಡದುಕೊಂಡಿದ್ದಾಗಿ ಅವರು ತಿಳಿಸುತ್ತಾರೆ. ಇವರ ಸಾಧನೆಗಾಗಿ ಐಎಎಸ್ ಅಕಾಡೆಮಿ ಧಾರವಾಡ್ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿ, ಧಾರವಾಡ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರ ಸಮ್ಮುಖದಲ್ಲಿ ಗೌರವಿಸಿ ಸ್ಮರಣಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬೇಕು.

2018 ರಲ್ಲಿ ಅವರು ಕೆಎಎಸ್‍ನ  ಪರೀಕ್ಷೆಯೊಂದರಲ್ಲಿ ಪ್ರಥಮ ರ್ಯಾಂಕ್ ಪಡೆದು ಯುಪಿಎಸ್‍ಸಿ ವಿದ್ಯಾರ್ಥಿವೇತನಕ್ಕೆ 16 ನೇ ರ್ಯಾಂಕ್ ಪಡೆದರು, ಅದರ ಆಧಾರದ ಮೇಲೆ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ತರಬೇತಿಯನ್ನು ಪಡೆಯಲು ಆಯ್ಕೆಗೊಂಡಿದ್ದರು ಎನ್ನಲಾಗಿದ್ದು ತಮ್ಮ ತರಬೇತಿಗಾಗಿ ಬೆಂಗಳೂರು ಯುನಿವರ್ಸಲ್ ಕೋಚಿಂಗ್ ಸೆಂಟರ್ ಅನ್ನು ಆಯ್ಕೆ ಮಾಡಿಕೊಂಡು ಉತ್ತಮ ತರಬೇತಿಯೊಂದಿಗೆ ಪಿಎಸ್ಐ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದರು.

ಪಿ.ಎಸ್.ಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ನವಯಾತ್ ಸಮುದಾಯದ ಮೊದಲ ಯುವಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವ ಮುಷಾಹಿದ್ ಅವರ ಸಾಧನೆಯು ಮುಸ್ಲಿಮ್ ಸಮುದಾಯಕ್ಕೆ ಮಾತ್ರವಲ್ಲದೆ ಎಲ್ಲಾ ಸಮುದಾಯಗಳಿಗೂ ಮಾದರಿಯಾಗಲಿದೆ.  ಈ ಮಹತ್ವದ ಸಾಧನೆಗಾಗಿ ತಝೀಮ್ ಸಂಸ್ಥೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಮುಖ್ಯಸ್ಥರು ಅಭನಂದಿಸಿದ್ದಾರೆ.

ಮುಷಾಹಿದ್ ಆಹ್ಮದ್ ಗೆ ರಾಬಿತಾಮಿಲ್ಲತ್ ನಿಂದ ಸನ್ಮಾನ

ಪಿಎಸ್‍ಐ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿಗೆ ಮೈಸೂರಿನಲ್ಲಿ ನಡೆಯುವ ತರಬೇತಿಯಲ್ಲಿ  ಭಾಗವಹಿಸಲು ಸಿದ್ಧನಾಗಿರುವ ತಾಲೂಕಿನ  ಹುರುಳಿಸಾಲ್ ಆಹ್ಮದ್ ಸಯೀದ್ ಮಸೀದಿ ಬಳಿಯ ನಿವಾಸಿ ಮುಷಾಹಿದ್ ಆಹ್ಮದ್ ಶೇಖ್ ರನ್ನು ರಾಬಿತಾ ಮಿಲ್ಲತ್ ಉತ್ತರಕನ್ನಡ ಹಾಗೂ ಭಟ್ಕಳದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಅವರ ನಿವಾಸಕ್ಕೆ ತೆರಳಿ ಶಾಲು ಹಾಗೂ ಪುಷ್ಪಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ, ಸೇವಾ ಅವಧಿಯಲ್ಲಿ ನ್ಯಾಯಾಪಾಲಿಸುವಂತೆ ಕರೆ ನೀಡಿದರು. ನಾವು ಒತ್ತಡಗಳಿಗೆ ಮಣಿಯದೆ ಪಕ್ಷ, ಜಾತಿ, ಕೋಮುಗಳನ್ನು ನೋಡದೆ ಕರ್ತವ್ಯದಲ್ಲಿ ನ್ಯಾಯಾಪಾಲಿಸಬೇಕಾದುದು ಓರ್ವ ನೈಜ ಮುಸ್ಲಿಮನ ಕರ್ತವ್ಯವಾಗಿದ್ದ ಅದನ್ನು ಈಡೇರಿಸಬೇಕಾದುದು ಪ್ರತಿಯೊಬ್ಬನ ಧರ್ಮವಾಗಿದೆ ಎಂದರು.

ಜಮಾಅತೆ ಇಸ್ಲಾಮಿ ಉ.ಕ ಜಿಲ್ಲಾ ಸಂಚಾಲಕ ಹಾಗೂ ರಾಬಿತಾ ಮಿಲ್ಲತ್ ಪ್ರ.ಕಾ ಮುಹಮ್ಮದ್ ತಲ್ಹಾ ಸಿದ್ದಿಬಾಪ ಮಾತನಾಡಿ ಭಟ್ಕಳದ ನವಾಯತ್ ಸಮುದಾಯದ ಯುವಕ ಪೊಲೀಸ್ ಸೇವೆಗೆ ಸೇರುತ್ತಿರುವುದು ಇದೇ ಮೊದಲಾಗಿದ್ದು ಎಲ್ಲ ಯುವಕರಿಗೆ ಮಾದರಿಯಾಗಿದ್ದಾರೆ. ಇವರನ್ನು ಅನುಸರಿ ಯುವಕರು ಮುಂದೆ ಬಂದು ಸರ್ಕಾರಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ರಾಬಿತಾ ಮಿಲ್ಲತ್ ಪತ್ರಿಕಾ ಕಾರ್ಯದರ್ಶಿ ಎಂ.ಆರ್.ಮಾನ್ವಿ, ಹುರುಸಾಲ್ ಆಹ್ಮದ್ ಸಯೀದ್ ಜಾಮಿಯಾ ಮಸೀದಿ ಖತೀಬ್ ಮತ್ತು ಇಮಾಮ್ ಮೌಲಾನ ಮುಹಮ್ಮದ್ ಜಾಫರ್ ನದ್ವಿ ಫಖ್ಕಿಭಾವ್, ಸಮಾಜ ಸೇವಕ ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಮುಷಾಹಿದ್ ನ ತಂದೆ ಮುಹಮ್ಮ್ ಹನೀಫ್ ಶೇಖ್, ಸಹೋದರ ಮಿಸ್ಬಾವುಲ್ ಹಕ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News