×
Ad

ಕಂದಾಯ ಅಧಿಕಾರಿಯ ಕಾಲಿಗೆ ಬಿದ್ದು ಸಹಾಯಕ್ಕಾಗಿ ಅಂಗಲಾಚಿದ ಇಬ್ಬರು ರೈತರು

Update: 2019-09-02 17:05 IST
Photo: www.ndtv.com

ಹೈದರಾಬಾದ್, ಸೆ.2: ತೆಲಂಗಾಣದ ಕಂದಾಯ ಅಧಿಕಾರಿಯೊಬ್ಬರ ಕಾಲಿಗೆ ಇಬ್ಬರು ವೃದ್ಧ ರೈತರು ಬಿದ್ದು ಸಹಾಯಕ್ಕೆ ಅಂಗಲಾಚುತ್ತಿರುವ ವೀಡಿಯೋ ವೈರಲ್ ಆಗಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆಯೆನ್ನಲಾದ ಈ ಘಟನೆಯ ವೀಡಿಯೋದಲ್ಲಿ  ತಮ್ಮ ಜೀವನೋಪಾಯ ಹಾಗೂ ಜಮೀನನ್ನು ಸೆಳೆಯದಂತೆ ರೈತರಿಬ್ಬರು ಅಧಿಕಾರಿ ಬಳಿ ಗೋಗರೆಯುತ್ತಿರುವುದು ಕೇಳಿಸುತ್ತದೆ. ಆದರೆ ಅಧಿಕಾರಿ ಅವರ ಕೋರಿಕೆಗೆ ಕಿವಿಗೊಡದೆ ಅಲ್ಲಿಂದ ಹೊರಟು ಹೋಗುವುದು ಕಾಣಿಸುತ್ತದೆ.

ಇನ್ನೊಂದು ವೀಡಿಯೋದಲ್ಲಿ ರೈತ ಸತ್ತಯ್ಯ, ಆತನ ಸೋದರ ಲಿಂಗಯ್ಯ ಹಾಗೂ ಇನ್ನೊಬ್ಬ ರೈತ ಮಲ್ಲಯ್ಯ ಮಾತನಾಡುತ್ತಿರುವುದು ಹಾಗೂ ಅವರ ಭೂಮಿಯ ಮೇಲಿನ ಹಕ್ಕನ್ನು ಸಾಬೀತುಪಡಿಸುವ ಪಟ್ಟದಾರ್ ಪಾಸ್ ಪುಸ್ತಕವನ್ನು  ಸೆಳೆಯಲಾಗಿದೆ ಹಾಗೂ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ಎರಡು ಎಕರೆಗಿಂತ ಸ್ವಲ್ಪ ಹೆಚ್ಚಿಗೆ ಇರುವ ಅವರ ಜಮೀನನ್ನು ರಿಝ್ವಿ ಎಂಬವರ ಹೆಸರಿಗೆ ವರ್ಗಾಯಿಸಲಾಗಿದೆಯೆನ್ನಲಾಗಿದ್ದು, ಅವರು ಕಳೆದ ಆರೆಂಟು ತಿಂಗಳಿನಿಂದ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. “ಕಲೆಕ್ಟರ್ ಅಥವಾ ಎಂಆರ್‍ಒ ಬಂದಾಗ ಒಂದು ಗಂಟೆಯೊಳಗೆ ಮಾಡಿಕೊಡಲಾಗುವುದು ಎಂದು ಹೇಳುತ್ತಾರೆ ಆದರೆ ಸ್ಥಳೀಯ ಅಧಿಕಾರಿಗಳು ಮಾಡಿಕೊಡುತ್ತಿಲ್ಲ'' ಎಂದು ಸತ್ತಯ್ಯ ಹೇಳುತ್ತಾನೆ.

“ಅವರು ನಮ್ಮನ್ನು ಬೆದರಿಸಿ ಅವಮಾನಿಸುತ್ತಾರೆ. ನಾವು ರೈತರು, ಗೌರವದಿಂದ ಮಾತನಾಡಿ ಎಂದು ಹೇಳಿದೆ. ಆದರೆ ಅವರು ನಿಮ್ಮ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಬಲ್ಲೆ ಎಂದರು'' ಎಂದು ಲಿಂಗಯ್ಯ ಹೇಳಿದ್ದಾನೆ.

ಭೂದಾಖಲೆಗಳ ಕಂಪ್ಯೂಟರೀಕರಣ ಹಾಗೂ ಆನ್ಲೈನ್ ನಲ್ಲಿ ದಾಖಲೆಗಳ ಲಭ್ಯತೆಗೆ ಕ್ರಮ ಕೈಗೊಂಡಂದಿನಿಂದ ಹಲವಾರು ದಾಖಲೆಗಳಲ್ಲಿ ಲೋಪದೋಷಗಳು ರೈತರಿಗೆ ಸಮಸ್ಯೆಯಾಗಿರುವ ಹಲವು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News